ಕುಂದಾಪುರ, ಏ 9(DaijiworldNews/MS): ಗಂಗೊಳ್ಳಿಯಲ್ಲಿ ಮತ್ತೆ ಮೂವತ್ತಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಏ.9 ರ ಗುರುವಾರ ಮಧ್ಯಾಹ್ನ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಕಟ್ಬೇಲ್ತೂರು ನಿವಾಸದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಕುಹಿತ್ಲುವಿನ ಮೂವತ್ತಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರನ್ನು ಗೋಪಾಲ ಪೂಜಾರಿಯವರು ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಬಾವುಟು ನೀಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿಕೊಂಡರು.

ಈ ವೇಳೆಯಲ್ಲಿ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ, ಮುಂದೆ ಬರುವ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಪಕ್ಷ, ಸಂಘಟನೆಯನ್ನು ಗಂಗೊಳ್ಳಿಯಿಂದಲೇ ಆರಂಭಿಸುತ್ತೇನೆ. ಕಾಂಗ್ರೆಸ್ ಮುಖಂಡ ಶರತ್ ಕುಮಾರ್ ಶೆಟ್ಟಿಯವರ ಉಸ್ತುವಾರಿಯಲ್ಲಿ ತ್ರಾಸಿ ಜಿಲ್ಲಾಪಂಚಾಯತ್ ವ್ಯಾಪ್ತಿಯ ಅನೇಕ ಬಿಜೆಪಿ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಅವರೆಲ್ಲರನ್ನೂ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತೇವೆ. ಇಂದು ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಕಣ್ಣೀರು ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ವಿರೋಧಿಸಿ ಜನರನ್ನು ಸಂಘಟಿಸಿಕೊಂಡು ತ್ರಾಸಿಯಿಂದ ಗಂಗೊಳ್ಳಿ ತನಕ ಪಾದಯಾತ್ರೆ ನಡೆಸುತ್ತೇನೆ. ನನ್ನ ನಾಯಕತ್ವವನ್ನು ನೆಚ್ಚಿ ಪಕ್ಷದಿಂದ ಏನೂ ಅಧಿಕಾರದ ಬೇಡಿಕೆ ಇಡದೆ ಕಾಂಗ್ರೆಸ್ ಪಕ್ಷಕ್ಕೆ ಬಂದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ವೇಳೆಯಲ್ಲಿ ತ್ರಾಸಿ ಜಿಲ್ಲಾಪಂಚಾಯತ್ ಉಸ್ತುವಾರಿ ಶರತ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಖಾರ್ವಿ, ಯುತ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಗಂಗೊಳ್ಳಿ, ಬ್ಲಾಕ್ ನ ಉಪಾಧ್ಯಕ್ಷ ಝಾಹೀರ್ ಗಂಗೊಳ್ಳಿ, ವಂಡ್ಸೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕರ್ಕಿ ಉಪಸ್ಥಿತರಿದ್ದರು.