ಮಂಗಳೂರು, ಏ 9(DaijiworldNews/MS): "ಭಾಗ್ಯಮಿತ್ರ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 1 ಕೋಟಿ ರೂ ಲಭಿಸಿದೆ " ಎಂದು ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿತ್ತಿದ್ದ ಮೊಯ್ದಿನ್ ಕುಟ್ಟಿ(65) ಹೇಳಿಕೊಂಡಿರುವುದು ಸಂಪೂರ್ಣ ಕಟ್ಟುಕತೆಯಾಗಿದೆ ಎನ್ನುವುದು ಬಹಿರಂಗವಾಗಿದೆ.

ರಾತ್ರೋರಾತ್ರಿ ಸೆಕ್ಯೂರಿಟಿ ಗಾರ್ಡ್ ಒಂದು ಕೋಟಿಯ ಶ್ರೀಮಂತರಾದ ಎಂಬ ವರದಿ ಮಾದ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ ನಾಪತ್ತೆಯಾಗಿದ್ದಾರೆ.
ಕುಟ್ಟಿ ಹಲವಾರು ಜನರಿಂದ ಸಾಲ ಪಡೆದಿದ್ದು, ತಮ್ಮ ಲಾಟರಿ ಟಿಕೆಟ್ ಅನ್ನು ಸೈಬರ್ ಕೇಂದ್ರದಲ್ಲಿ ಎಡಿಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಮೊಯ್ದಿನ್ ಕುಟ್ಟಿಯವರಲ್ಲಿ ಲಾಟರಿ ಟಿಕೆಟ್ ಖರೀಧಿಸಲು ಹಣವಿರಲಿಲ್ಲ ಹೀಗಾಗಿ ಸ್ಥಳೀಯ ಟೈಲರ್ ಅಂಗಡಿಯ ಮಾಲಕ ರವಿ ಅವರಿಂದ ಐನೂರು ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡು ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿ ಟಿಕೆಟ್ ಖರೀದಿಸಿ ಉಪ್ಪಳಕ್ಕೆ ತೆರಳಿ ಖರೀದಿಸಿದ್ದರು. ಟಿಕೆಟ್ ಎ.4ರಂದು ಡ್ರಾ ಆಗಿತ್ತು. ಇದರಲ್ಲಿ ಇವರು ಖರೀದಿಸಿದ ಬಿ.ಜೆ. 134048 ಸಂಖ್ಯೆಗೆ ಒಂದು ಕೋಟಿ ರೂ. ಪ್ರಥಮ ಬಹುಮಾನ ಬಂದಿದ್ದು ಲಾಟರಿಯ ಪ್ರಥಮ ಬಹುಮಾನದಲ್ಲಿ ಐದು ಮಂದಿ ಕೋಟಿ ವಿಜೇತರಲ್ಲಿ ಅವರು ಒಬ್ಬರು ಎಂದು ಹೇಳಿಕೊಂಡಿದ್ದರು. ಇದಲ್ಲದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು 1988 ರಲ್ಲಿ ದುಬೈ ಮೂಲದ ಲಾಟರಿಯಲ್ಲಿ 1 ಕೋಟಿ ದಿರಂ ಪಡೆದಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.