ಮಂಗಳೂರು, ಎ.09 (DaijiworldNews/PY): ನೋಟಿಸು ಜಾರಿ ಮಾಡಲು ಹೋಗಿದ್ದ ಪೊಲೀಸರ ಮೇಲೆ ದಾಳಿ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಅನ್ಸಾರ್

ಎಎಸ್ಐ ಅಶೋಕ್. ಕೆ ಹಾಗೂ ಪಿ.ಸಿ ಸತೀಶ್ ಗಾಯಗೊಂಡವರು. ಬಂಧಿತ ಯುವಕನನ್ನು ಅನ್ಸಾರ್ ಎಂದು ಗುರುತಿಸಲಾಗಿದೆ.
ಆರೋಪಿ ಅನ್ಸಾರ್ ಹೊಡೆದಾಟ ಪ್ರಕರಣದಲ್ಲಿ ಕೋರ್ಟ್ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಆತ ಮನೆಗೆ ಬಂದಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ನೋಟಿಸ್ ಜಾರಿ ಮಾಡಲು ಹೋದ ಸಂದರ್ಭ ಆತ ಪಕ್ಕದಲ್ಲಿರುವ ಆತನ ಸಂಬಂಧಿಯ ಮನೆಯೊಳಗೆ ನುಗ್ಗಿ ಬಾಗಿಲು ಹಾಕಿ ಮನೆಯೊಳಗೆ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕುತ್ತಿಗೆಗೆ ಚೂರಿ ಹಿಡಿದು ಪೊಲೀಸರಿಗೆ ಬೆದರಿಕೆ ಹಾಕಿದ್ದ.
ಈ ವೇಳೆ ಆರೋಪಿ ಮೈಮೇಲೆ ಚೂರಿಯಿಂದ ಗಾಯ ಮಾಡಿಕೊಂಡಿದ್ದು, ಈ ಕೃತ್ಯದಲ್ಲಿ ಆರೋಪಿಯ ತಂದೆ ಸಾದಿಕ್ ಸಹಕರಿಸಿದ್ದರು.
ಸ್ಥಳಕ್ಕೆ ಇನ್ಸ್ಪೆಕ್ಟರ್ ಕುಸುಮಾಧರ್ ಸಹಿತ ಉಳಿದ ಪೊಲೀಸರು ಭೇಟಿ ನೀಡಿದ ವೇಳೆಯೂ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ. ಮನೆಯಲ್ಲಿದ್ದ ಮಮ್ತಾಜ್ ಹಾಗೂ ಜುಬೇದಾ ಎಂಬವರು ಕೂಡಾ ಮನೆ ಬಾಗಿಲನ್ನು ತೆರೆಯಲಿಲ್ಲ. ಈ ವೇಳೆ ಹಿಂದಿನ ಬಾಗಿಲಿನ ಮೂಲಕ ಒಳಪ್ರವೇಶಿಸಿದ ಎಎಸ್ಐ ಅಶೋಕ್ ಕೆ ಹಾಗೂ ಪಿ.ಸಿ. ಸತೀಶ್ ಅವರು ಆರೋಪಿಯ ಕೈಯಿಂದ ಚೂರಿ ಎಳೆದ ಸಂದರ್ಭ ಅವರು ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಅನ್ಸಾರ್ನನ್ನು ಪೊಲೀಸರು ಬಂಧಿಸಿದ್ದಾರೆ.