ಉಡುಪಿ, ಎ.09 (DaijiworldNews/PY): "ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ನನ್ನ ಮೇಲೆ ಇಲ್ಲಸಲ್ಲದ ನಾಲ್ಕೈದು ಕೇಸುಗಳನ್ನು ಹಾಕಿದ್ದಾರೆ. ದಬ್ಬಾಳಿಕೆ, ಪಾಳೆಗಾರಿಕೆ, ನಿರಂತರ ಮಾನಸಿಕ ಹಿಂಸೆಗಳಿಂದ ರೋಸಿ ಹೋಗಿ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನದಲ್ಲಿ ಅಹವಾಲು ಸಲ್ಲಿಸುತ್ತಿದ್ದೇನೆ" ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಆರೋಪಿಸಿದರು.

ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಳೆದ ಹದಿನೆಂಟು ವರ್ಷದಿಂದ ನಾನು ಬಿಜೆಪಿಯಲ್ಲಿ ಪ್ರಾಮಾಣಿಕ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಕ್ಷೇತ್ರಾಧ್ಯಕ್ಷನಾಗಿದ್ದ ಸಂದರ್ಭವೇ ವಿಧಾನಸಭೆ ಚುನಾವಣೆ ನಡೆದಿದ್ದು, ಬೂತ್ ಮಟ್ಟದ ಸಂಘಟನೆ, ಪಕ್ಷದ ಹಿರಿಯರ ಸಹಕಾರದಿಂದ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು, ಸ್ವಾಸ್ಥ್ಯ ಬೈಂದೂರು ಕ್ಷೇತ್ರ ನಿರ್ಮಾಣದ ಬಗ್ಗೆ ಅವರ ಹೇಳಿಕೆಗಳು ಈಡೇರದ ಬಗ್ಗೆ ಕಾರ್ಯಕರ್ತರ ಅಸಮಾಧಾನವನ್ನು ನೇರವಾಗಿ ನಾನು ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯ ಗಮನಕ್ಕೆ ತಂದ ಕಾರಣ ಅವರು ನನ್ನ ಮೇಲೆ ರೇಗಾಡಿ ಅಂದಿನಿಂದ ನನ್ನೊಂದಿಗೆ ಹಗೆ ಸಾಧಿಸಲು ಆರಂಭಿಸಿದ್ದಾರೆ" ಎಂದರು.
"ನಾನು ಭಾರತ್ ಟೈಲ್ಸ್ ಎನ್ನುವ ಅಂಗಡಿ ಮಾಡಿಕೊಂಡಿದ್ದು ಸ್ಥಳೀಯರೊಬ್ಬರಲ್ಲಿ 20 ಲಕ್ಷ ಬಡ್ಡಿಗೆ ಹಣ ಪಡೆದುಕೊಂಡಿದ್ದು, ಈ ಸಂದರ್ಭ ಐದು ಬ್ಯಾಂಕ್ ಚೆಕ್ಗಳನ್ನೂ ನನ್ನಿಂದ ಪಡೆದುಕೊಂಡಿದ್ದರು. ಬಳಿಕ 20 ಲಕ್ಷಕ್ಕೆ 28 ಲಕ್ಷ ಬಡ್ಡಿ ಸೇರಿಸಿ ಒಟ್ಟು 48 ಲಕ್ಷ ಹಣವನ್ನು ಬ್ಯಾಂಕ್ ಮೂಲಕವೇ ವಾಪಸ್ಸು ಮಾಡಿದ್ದೇನೆ. ಈ ಸಂದರ್ಭ ನಾನು ನೀಡಿದ ಚೆಕ್ಗಳನ್ನು ವಾಪಾಸ್ಸು ನೀಡಿರುವುದಿಲ್ಲ. ಈ ಬಗ್ಗೆ ಪಂಚಾಯತಿಕೆಯೂ ಕೂಡಾ ನಡೆದಿದ್ದು, ಚೆಕ್ ಮರಳಿಸಲು ಒಪ್ಪಿಕೊಂಡಿದ್ದರು. ಆದರೆ ಇದೇ ಸಂದರ್ಭ ಆ ಖಾಲಿ ಚೆಕ್ ಶಾಸಕರ ಕೈ ಸೇರಿದ್ದು ನನ್ನ ವಿರುದ್ಧ ಚೆಕ್ಬೌನ್ಸ್ ಕೇಸ್ ಹಾಕಿಸಿದ್ದಾರೆ" ಎಂದು ದೂರಿದರು.
"ನಾನು ಬಿಜೆಪಿ ಅಧ್ಯಕ್ಷನಾಗಿದ್ದ ಸಂದರ್ಭ ಐದು ವರ್ಷದಲ್ಲಿ 45 ಲಕ್ಷಕ್ಕೂ ಹೆಚ್ಚು ಸುಕುಮಾರ ಶೆಟ್ಟಿಯವರ ಗೆಲುವಿಗಾಗಿ ಹಣ ಖರ್ಚು ಮಾಡಿದ್ದು, ಅದರ ಲೆಕ್ಕವನ್ನು ಶಾಸಕರಿಗೆ ನೀಡಿದ್ದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅಷ್ಟೂ ಹಣವನ್ನು ವಾಪಾಸ್ಸು ನೀಡುವುದಾಗಿ ನಂಬಿಸಿದ್ದರು. ಅದರಂತೆ ತಲಾ 5 ಲಕ್ಷದ ಎರಡು ಚೆಕ್ಗಳನ್ನು ನೀಡಿದ್ದು 10 ಲಕ್ಷ ಪಡೆದುಕೊಂಡಿದ್ದೇನೆ. ಇನ್ನೂ 35 ಲಕ್ಷ ಹಣ ಶಾಸಕರಿಂದ ನನಗೆ ಬರಲು ಬಾಕಿ ಇದ್ದರೂ ನನ್ನ ಮೇಲೆಯೇ ಚೆಕ್ ಬೌನ್ಸ್ ಕೇಸ್ ಹಾಕಿಸಿ ನನಗೆ ಮಾನಸಿಕ ಹಿಂಸೆ ನೀಡಲಾರಂಭಿಸಿದ್ದಾರೆ" ಎಂದರು.
"ಮೂಕಾಂಬಿಕೆ ಸತ್ಯವನ್ನು ಗಮನಿಸುತ್ತಾಳೆ. ನನ್ನ ನೋವನ್ನು ನಾನು ನಿವೇದಿಸಿಕೊಂಡಿದ್ದೇನೆ. ನಾನು ಚೆಕ್ ನೀಡಲಿಲ್ಲ ಎನ್ನುವುದಕ್ಕೆ ಪ್ರಮಾಣಕ್ಕೂ ಸಿದ್ಧ, ಅದರಂತೆ ಶಾಸಕರು ಕೂಡಾ ಕೊಲ್ಲೂರು ದೇವಳದಲ್ಲಿ ಬಂದು ಪ್ರಮಾಣ ಮಾಡಲಿ" ಎಂದು ಆಹ್ವಾನ ನೀಡಿದರು.
ರೇಷ್ಮಾ ಸದಾನಂದ ಮಾತನಾಡಿ, "ಶಾಸಕರಿಂದ ನಮ್ಮ ಕುಟುಂಬ ನೆಮ್ಮದಿ ಹಾಳಾಗಿದೆ. ವ್ಯರ್ಥ ಆರೋಪ, ಸುಳ್ಳು ಕೇಸುಗಳನ್ನು ಹಾಕುವುದು, ಮಾನಸಿಕವಾಗಿ ಕಿರುಕುಳ ನೀಡುವುದನ್ನು ನಿಲ್ಲಿಸದಿದ್ದರೆ ಅವರ ಮನೆಯ ಮುಂದೆಯೇ ನಾನು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ಲೀಲಾವತಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.