ಬೆಂಗಳೂರು, ಸೆ14(SS): ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ವಿದ್ಯಮಾನಗಳು ನಡೆಯುತ್ತಿದ್ದು, ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ.
ಸಮ್ಮಿಶ್ರ ಸರ್ಕಾರದ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶಿತರಾಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಎಲ್ಲಾ ರಾಜಕೀಯ ಬೆಳವಣಿಗೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣವಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಶೀಘ್ರ ಕಡಿವಾಣ ಹಾಕಬೇಕು ಎಂದು ಕೈ ಹೈಕಮಾಂಡ್ಗೆ ದೇವೇಗೌಡರು ಸಂದೇಶ ರವಾನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸರಿಪಡಿಸಬೇಕು. ಒಂದು ವೇಳೆ ಸಿದ್ದರಾಮಯ್ಯ ಸರಿ ಇಲ್ಲದಿದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಖಂಡಿತವಾಗಿಯೂ ಉಳಿಗಾಲವಿಲ್ಲ. ನನ್ನ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವ ದಿನದಿಂದ ಅವನಿಗೆ ಕಿರುಕುಳ ನಿಲ್ಲುತ್ತಿಲ್ಲ. ಬರೀ ಇದೆ ಆಯಿತು, ನೀವು ಮಧ್ಯಪ್ರವೇಶ ಮಾಡಿ ಸರಿ ಮಾಡಿ ಇಲ್ಲದಿದ್ದರೆ ನಮಗೂ ಗೊತ್ತಿದೆ ಎಂದು ಹೇಳಿದ್ದಾರೆ.
2019ರಲ್ಲಿ ಬರಲಿರುವ ಲೋಕಸಭೆ ಚುನಾವಣೆ ನಿಮಗೆ ಎಷ್ಟು ಮುಖ್ಯವೋ ನಮಗೂ ಕೂಡ ಅಷ್ಟೇ ಮುಖ್ಯವಾಗಿದೆ. ಕಾಂಗ್ರೆಸ್ ನಾಯಕರು ಮೇಲಾಟಗಳನ್ನು ನಿಲ್ಲಿಸದಿದ್ದರೆ ನಮಗೂ ದಾರಿ ಬದಲಿಸಲು ಗೊತ್ತಿದೆ ಎಂದು ಎಐಸಿಸಿ ನಾಯಕ ಗುಲಾಂ ನಭೀ ಅಜಾದ್ ಅವರಲ್ಲಿ ತಿಳಿಸಿದ್ದಾರೆ.