ಮಂಗಳೂರು, ಸೆ14(SS): ಭಾರತೀಯ ರಾಷ್ತ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ, ಲೋಕಮಾನ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ದೇಶಪ್ರೇಮ ಹೆಚ್ಚಿಸುವುದರ ಜೊತೆಗೆ ನಮಗೆಲ್ಲ ಮಾದರಿಯಾಗಬೇಕು ಎಂದು ಬೆಳ್ತಂಗಡಿ ಕ್ಷೇತ್ರದ ಯುವ ಬಿಜೆಪಿ ಶಾಸಕ ಹರೀಶ್ ಪೂಂಜಾ ತಿಳಿಸಿದರು.
ದಾಯ್ಜಿವರ್ಲ್ಡ್ ವಾಹಿನಿಯ ಜೊತೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ಬಂದಿದೆ. ವರ್ಷದಿಂದ ವರ್ಷಕ್ಕೆ ಆಡಂಬರ ಆಚರಣೆಗಳಲ್ಲಿ ವ್ಯತ್ಯಾಸವಾಗಿದ್ದರೂ, ಸಂಘಟನೆಗಳ ಶಕ್ತಿಯಿಂದ ಎಂದಿನಂತೆ ನಡೆಯುವ ಗಣೇಶ ಉತ್ಸವಕ್ಕೆ ಕೊರತೆ ಬಂದಿಲ್ಲ. ಇದಕ್ಕೆ ಕಾರಣ ಸಂಘಟನೆಗಳು. ಕಲಿಯುಗದಲ್ಲಿ ಸಂಘಟನೆಗಳು ಧರ್ಮ ರಕ್ಷಿಸುವ ಕೆಲಸ ಮಾಡುತ್ತಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ತಿಲಕರು ಕರೆ ನೀಡಿದ್ದ ಸಾರ್ವಜನಿಕ ಗಣೇಶೋತ್ಸವವನ್ನು ಸಂಘಟನೆಗಳು ಶ್ರದ್ಧೆ ಭಕ್ತಿಯಿಂದ ಇಂದಿಗೂ ಮಾಡುತ್ತಿದೆ, ಮುಂದೆಯೂ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಗಣೇಶನ ಬೃಹತ್ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ದಿನದಿಂದ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯವರೆಗೆ ಸನಾತನ ಧರ್ಮದ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸಬೇಕು. ಆಧುನಿಕತೆಯ ಸೆಲೆಗೆ ಸಿಲುಕದೆ ಸನಾತನ ಧರ್ಮದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಸಾರ್ವಜನಿಕ ಗಣೇಶೋತ್ಸವ ಸಂದರ್ಭ ನಡೆಸಬೇಕು. ತಿಲಕರ ವಿಚಾರಧಾರೆಯ ಗಣೇಶೋತ್ಸವವೆಂದರೆ ದೇಶದ ಅಸ್ಮಿತೆಯ ಪ್ರತಿರೂಪ. ಹಾಗಾಗಿ ಧರ್ಮ ರಕ್ಷಣೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಒಟ್ಟು ಸೇರಿ ಗಣೇಶೋತ್ಸವವನ್ನು ದೇಶಕ್ಕೆ ಮಾದರಿಯಾಗುವಂತೆ ನಡೆಸಬೇಕು ಎಂದು ತಿಳಿಸಿದರು.
ಅಂದು ಬ್ರಿಟಿಷರ ದಾಸ್ಯದಿಂದ ನಲುಗಿ ಹೋಗಿದ್ದ ಭಾರತವನ್ನು ಬಾಲಗಂಗಾಧರ್ ತಿಲಕರು ಸಾರ್ವಜನಿಕ ಗಣೇಶೋತ್ಸವವದ ಮೂಲಕ ಮುಕ್ತಿ ಹೊಂದುವಂತೆ ಮಾಡಿದರು. ತಿಲಕರು ಕೊಟ್ಟ ಕರೆಗೆ ಎಲ್ಲರೂ ಒಟ್ಟು ಸೇರಿದರು. ಸಂಘಟನೆಗಳು ಬೆಳೆಯಿತು. ಅಧರ್ಮ ನಡೆಸುತ್ತಿದ್ದ ಬ್ರಿಟಿಷರನ್ನು ನಡುಗಿಸಲು ಗಣೇಶೋತ್ಸವ ಕಾರಣವಾಯಿತು. ಹಾಗಾಗಿ ಸಂಘಟನೆಗಳು ಇನ್ನೂ ಕೂಡ ಬಲಿಷ್ಟವಾಗಬೇಕು. ಯಾವುದೇ ಅಧರ್ಮಗಳಿಗೆ ಇಲ್ಲಿ ಅವಕಾಶ ಕೊಡಬಾರದು. ಸಾರ್ವಜನಿಕ ಗಣೇಶೋತ್ಸವ ಮೂಲಕ ದೇಶ ಕಟ್ಟುವ ಕೆಲಸ ನಾವೆಲ್ಲರೂ ಒಟ್ಟು ಸೇರಿ ಮಾಡಬೇಕು. ಸಂಸ್ಕೃತಿ-ಸಂಪ್ರದಾಯ ಉಳಿಯಬೇಕು ಎಂದು ಹೇಳಿದರು.