Karavali
ಮಾತಿನಲ್ಲೇ ಮೋಡಿ ಮಾಡಿ ಕರಾವಳಿಗರ ಮನ ಗೆದ್ದ ಆರ್ ಜೆ ಎರೋಲ್ ಗೊನ್ಸಾಲ್ವಿಸ್
- Fri, Sep 14 2018 04:10:00 PM
-
ಸುಪ್ರೀತಾ ಸಾಲ್ಯಾನ್
ಗಂಟೆಗಟ್ಟಲೆ ನಾಲ್ಕು ಗೋಡೆಗಳ ನಡುವೆ ಕೂತು ಮಾತಾಡುವುದು ನಾವಂದುಕೊಂಡಷ್ಟು ಸಲೀಸಿನ ಸಂಗತಿಯಲ್ಲ. ಇದು ನಿಜಕ್ಕೂ ಸವಾಲಿನ ಕೆಲಸ. ಆದರೆ ಅಚ್ಚ ಕನ್ನಡದಲ್ಲಿ ಅರಳು ಹುರಿದಂತೆ ಮಾತಾಡೋ ಸಾಮಾರ್ಥ್ಯ ಈ ಪ್ರತಿಭೆಯಲ್ಲಿದೆ. ಮಾತಿಗೆ ನಿಂತರೆ ಜಗತ್ತನ್ನೇ ಮೋಡಿ ಮಾಡುವ ಉತ್ತಮ ವಾಗ್ಮಿ. ನೊಂದ ಮನಸುಗಳಿಗೆ ತನ್ನ ಮಾತಿನಲ್ಲೇ ಸಾಂತ್ವನ ಹೇಳುವ, ಆತ್ಮವಿಶ್ವಾಸ ತುಂಬುವ ದಿಟ್ಟ ಪಾತ್ರ ಇವರದು. ಅಂದ ಹಾಗೆ ಇವರ ಹೆಸರು ಆರ್.ಜೆ ಎರೋಲ್.
92.7 ಬಿಗ್ ಎಫ್ಎಂ ರೇಡಿಯೋ ಜಾಕಿ ಎರೋಲ್ ಅಂದರೆ ಎಲ್ಲರಿಗೂ ಚಿರಪರಿಚಿತ. ನೊಂದ ಮನಸ್ಸುಗಳಿಗೆ ದನಿಯಾಗುವುದರ ಜೊತೆಗೆ ಪಟ ಪಟನೆ ಮಾತಾಡುವ ಎರೋಲ್ ತನ್ನ ಅದ್ಭುತವಾದ ವಾಕ್ ಚಾತುರ್ಯದಿಂದ ಅಪಾರ ಅಭಿಮಾನಿಗಳನ್ನು ಸದ್ದಿಲ್ಲದೆ ಸಂಪಾದಿಸಿಕೊಂಡಿದ್ದಾರೆ. ಎರೋಲ್ ಅವರ ಬೋಲ್ಡ್ ಮಾತುಗಳಿಗೆ ಯಾರಾದರೂ ಕ್ಲೀನ್ ಬೌಲ್ಡ್ ಆಗಲೇಬೇಕು. ಅಂತಹ ವಾಕ್ ಚಾತುರ್ಯ ಇವರದು.
ಸುಮಾರು 7 ವರ್ಷಗಳಿಂದ ರೆಡಿಯೋ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಎರೋಲ್ ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ. ಪ್ರಾಥಮಿಕ ಶಿಕ್ಷಣ ಪೂರೈಸಿದ್ದು ಉಡುಪಿ ಉದ್ಯಾವರದ ಸೈಂಟ್ ಫ್ರಾನ್ಸಿಸ್ ಶಾಲೆಯಲ್ಲಿ. ಡಿಗ್ರಿ ಪದವಿ ಗಿಟ್ಟಿಸಿಕೊಂಡಿದ್ದು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ. ಮಣಿಪಾಲದ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ. ಇಷ್ಟೆಲ್ಲಾ ಮುಗಿದ ಬಳಿಕ ತಾಯಿಗೆ ಮಗ ವಿದೇಶಕ್ಕೆ ಹೋಗಬೇಕು ಎಂಬ ಬಯಕೆಯಿತ್ತು. ಆದರೆ ಇವರಿಗೆ ಸಿನಿಮಾ ಕ್ಷೇತ್ರ ಸೇರುವ ತವಕ ಇತ್ತು. ಅದಕ್ಕಾಗಿ ಎರೋಲ್ ಹೋಗಿದ್ದು ಬೆಂಗಳೂರಿಗೆ. ಸಿನಿಮಾ ಮೇಲಿನ ಹಂಬಲದಿಂದ ಬೆಂಗಳೂರಿನಲ್ಲಿ ಎರೋಲ್ ಅಲೆದಾಡಿದಕ್ಕೆ ಲೆಕ್ಕವೇ ಇಲ್ಲ. ಅನೇಕ ಸಿನಿಮಾ ನಿರ್ಮಾಪಕರು, ನಿರ್ದೇಶಕರಿಗೆ ಫೋಟೋ ಕ್ಲಿಕ್ಕಿಸಿ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ ಏನೂ ಪ್ರಯೋಜನವಾಗಲಿಲ್ಲ. ಬಾಲ್ಯದಲ್ಲಿ ಸಿನಿಮಾ ಕ್ಷೇತ್ರ ಸೇರಬೇಕು, ತಾನು ಸಿನಿಮಾ ನಟನಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ಎರೋಲ್ ಗೇರು ಬೀಜ ಮಾರಿ ಬಂದ ಹಣದಲ್ಲಿ ಗಾಂದಿ ಕ್ಲಾಸಲ್ಲಿ ಕೂತು ಸಿನಿಮಾ ನೋಡುತ್ತಿದ್ದರು. ಸಿನಿಮಾ ಕ್ಷೇತ್ರ ಸೇರಬೇಕು ಎಂದು ಕನಸು ಕಟ್ಟಿಕೊಂಡು ಬೆಂಗಳೂರಿಗೆ ಹೋದ ಎರೋಲ್ ಪ್ರಯತ್ನಕ್ಕೆ ಸೋಲಾಯಿತು. ಇದರಿಂದ ನಿರಾಶರಾದ ಎರೋಲ್ ಮತ್ತೆ ಮಂಗಳೂರಿಗೆ ವಾಪಸ್ಸಾದರು. ಆಗ ಇವರ ಕೈ ಹಿಡಿದದ್ದು ರೆಡಿಯೋ ಕ್ಷೇತ್ರ.
ತಾನು ರೆಡಿಯೋ ಜಾಕಿ ಆಗುತ್ತೇನೆ ಎಂಬ ಕನಸು ಇವರಲ್ಲಿ ಎಳ್ಳಷ್ಟೂ ಇರಲಿಲ್ಲ. ಆದರೆ ಬಯಸದೆ ಬಂದ ಭಾಗ್ಯ ಎರೋಲ್ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಸಾಮಾನ್ಯವಾಗಿ ರೇಡಿಯೋ ಅಂದರೆ ತೆರೆಯ ಹಿಂದೆ ಕೂತು ಮಾಡುವ ಕೆಲಸ. ಆದರೆ ತೆರೆ ಮರೆಯಲ್ಲಿ ಎಂಬ ವಿಚಾರವನ್ನು ಮರೆ ಮಾಚುವಂತೆ ಎರೋಲ್ ರೆಡಿಯೋ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಮಾತಿನ ಮೂಲಕ ಅಪಾರ ಕೇಳುಗರನ್ನು ಮೋಡಿ ಮಾಡಿದ್ದಾರೆ. ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ತನ್ನ ವಿಶಿಷ್ಟ ನಿರೂಪಣಾ ಶೈಲಿಯಿಂದ ಜನರಿಂದ ಭೇಷ್ ಅನಿಸಿಕೊಂಡಿದ್ದಾರೆ.
92.7 ಬಿಗ್ ಎಫ್ಎಂನಲ್ಲಿ ಕಳೆದ 7 ವರುಷಗಳಿಂದ ಪ್ರತಿನಿತ್ಯ 12 ರಿಂದ 4 ಗಂಟೆಯವರೆಗೆ “ಯು, ಮಿ ಆ್ಯಂಡ್ ಲವ್ ಸಾಂಗ್” ಎನ್ನುವ ವಿನೂತನ ಕಾರ್ಯಕ್ರಮ ನಡೆಸಿಕೊಡುತ್ತಿರುವ ಇವರು, ಈ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅಭಿಮಾನಿಗಳ ಬಾಯಲ್ಲಿ ಲವ್ವರ್ ಬಾಯ್ ಎಂದು ಎರೋಲ್ ಕರೆಸಿಕೊಳ್ಳುತ್ತಿರುವುದು.
“ಯು, ಮಿ ಆ್ಯಂಡ್ ಲವ್ ಸಾಂಗ್” ಎಂಬ ಕಾರ್ಯಕ್ರಮದಡಿಯಲ್ಲಿ ಎರೋಲ್ ಪ್ರೀತಿಯಲ್ಲಿ ಸೋತ ಹೆಜ್ಜೆಗಳಿಗೆ ಸಾಂತ್ವಾನ ಹೇಳುವುದರ ಜೊತೆಗೆ ಯುವ ಮನಸ್ಸುಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದಕ್ಕೆ ನಿದರ್ಶನ, ಮಡಿಕೇರಿಯ ಚರಣ್ ಎಂಬುವವರು ಕಾಲಿನ ಸ್ವಾಧೀನ ಕಳೆದುಕೊಂಡು ಮೂಲೆ ಸೇರಿದ್ದ ಯಶೋಗಾಥೆ. ಕಾಲಿನ ಸಮಸ್ಯೆಯಿಂದ ವಿಕಲ ಚೇತನರಾಗಿದ್ದ ಚರಣ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಈ ವೇಳೆ ಚರಣ್ ಅವರು ಎರೋಲ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ಕರೆ ಮಾಡಿದ್ದು, ಎರೋಲ್ ಅವರಲ್ಲಿ ಧೈರ್ಯ ತುಂಬಿದ್ದಾರೆ. ಎರೋಲ್ ಅವರ ಉತ್ಸಾಹದ ಮಾತುಗಳಿಂದ ಸ್ಫೂರ್ತಿ ಪಡೆದುಕೊಂಡ ಚರಣ್ ಮಾನಸಿಕ ಖಿನ್ನತೆಯಿಂದ ಹೊರ ಬಂದಿದ್ದಾರೆ. ಇದು ರೆಡಿಯೋ ಕ್ಷೇತ್ರದಲ್ಲಿ ಎರೋಲ್ ಮಾಡಿದ ಸಾರ್ಥಕತೆಯ ಕೆಲಸ.
ಇಷ್ಟೇ ಅಲ್ಲ ಆರ್.ಜೆ ಎರೋಲ್ ರೆಡಿಯೋ ಶೋ ಮೂಲಕ ಹಲವಾರು ಚಿತ್ರಗಳಿಗೆ ವ್ಯಾಪಕ ಪ್ರಚಾರ ಕಲ್ಪಿಸೋ ಕೆಲಸಕ್ಕೂ ಕೈ ಹಾಕಿದ್ದಾರೆ. ಕನ್ನಡ, ಹಿಂದಿ ಸೇರಿದಂತೆ ತುಳು ಚಿತ್ರಗಳಿಗೆ ರೆಡಿಯೋ ಮೂಲಕ ಎರೋಲ್ ಪ್ರಮೋಟ್ ನೀಡುತ್ತಿದ್ದಾರೆ. ಹೀಗೆ ಒಂದಕ್ಕಿಂತ ಒಂದು ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಮುನ್ನಡೆಸುತ್ತಾ ಎರೋಲ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೇವಲ ರೇಡಿಯೋ ವಲಯ ಮಾತ್ರವಲ್ಲದೆ ಸಾಮಾಜಿಕ ಸೇವೆ ಮಾಡುವ ಎರೋಲ್ ಅನೇಕ ಬಡ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಇವರಿಗೆ ಬೀದಿ ನಾಯಿಗಳ ಬಗ್ಗೆ ಅಪಾರವಾದ ಕಾಳಜಿ ಇದೆ. ಬೀದಿ ನಾಯಿಗಳು ಶೋಚನೀಯ ಸ್ಥಿತಿಯಲ್ಲಿದ್ದರೆ ಅವುಗಳ ಆರೈಕೆ ಮಾಡುವ ಮಾನವೀಯತೆಯ ಕೆಲಸಗಳನ್ನು ಅನೇಕ ಬಾರಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಮಾತ್ರವಲ್ಲ, ರಕ್ತದ ಅವಶ್ಯಕತೆ ಇರುವ ಅನೇಕ ಜನರಿಗೆ ದಾನಿಗಳ ನೆರವಿನಿಂದ ರಕ್ತ ಪೂರೈಸಿ ಜೀವ ಉಳಿಸುವ ಪುಣ್ಯದ ಕೆಲಸ ಮಾಡಿ ಭೇಷ್ ಅನಿಸಿಕೊಂಡಿದ್ದಾರೆ. ಪರಿಸರ ಸಂರಕ್ಷಣೆ, ಎಂಡೋ ಸಂತ್ರಸ್ತರಿಗೆ ನೆರವು ನೀಡುವ ಸಮಾಜ ಸೇವೆಯ ಚಟುವಟಿಕೆ, ಚುರುಕುತನಗಳ ಮೂಲಕ ಎಲ್ಲರ ಮನ ಗೆದ್ದಿರುವ ಎರೋಲ್ ಎತ್ತೆತ್ತ ಸುತ್ತಿದರೂ ಮತ್ತೆ ಮತ್ತೆ ಬಂದು ರೇಡಿಯೋ ಲೋಕದಲ್ಲಿಯೇ ಸಕ್ರಿಯರಾಗುತ್ತಾರೆ. ಅವರನ್ನು ರೆಡಿಯೋ ವಲಯದಲ್ಲಿಯೇ ನೋಡ ಬಯಸೋ ಮನಸುಗಳೂ ಕೂಡಾ ಲೆಕ್ಕವಿಲ್ಲದಷ್ಟಿವೆ.
ಉತ್ತಮ ರೆಡಿಯೋ ಜಾಕಿ ಎನಿಸಿಕೊಂಡಿರುವ ಎರೋಲ್ ಈ ಎಲ್ಲಾ ಸಾಧನೆಯ ಜೊತೆಗೆ ಬಾಲ್ಯದಲ್ಲಿ ಕಂಡ ಕನಸನ್ನು ಕೂಡ ನನಸು ಮಾಡುತ್ತಿದ್ದಾರೆ. ನಟನಾಗಬೇಕು, ಸಿನಿಮಾ ಪರದೆಯಲ್ಲಿ ನಾನೂ ಕಾಣಿಸಿಕೊಳ್ಳಬೇಕು ಎಂಬ ಎರೋಲ್ ಕನಸು ಇನ್ನೇನು ಕೆಲವೇ ದಿನಗಳಲ್ಲಿ ಈಡೇರಲಿದೆ. ಹೌದು, ಎರೋಲ್ ಕನ್ನಡದ "ಜೀವನ ಯಜ್ಞ" ಎಂಬ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದು, ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ತೆರೆ ಕಾಣಲಿದೆ.