ಮಂಗಳೂರು, ಅ5 : ಇಲ್ಲಿನ ಹೃದಯ ಭಾಗವಾಗಿರುವ ಬೆಂದೂರುವೆಲ್ ವೃತ್ತದಿಂದ ಕರಾವಳಿ ವೃತ್ತದವರೆಗೆ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ಗುರುವಾರ ಪ್ರತಿಭಟನೆ ನಡೆಸಿದರು. ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ಮತ್ತು ನೀರಿನ ಪೈಪ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಬೆಂದೂರುವೆಲ್ ಕರಾವಳಿ ವೃತ್ತದ ಬಳಿಯ ಸೇರಿದ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದರು. ಹಲವು ವರ್ಷಗಳಿಂದ ಈ ರಸ್ತೆಯನ್ನು ದುರಸ್ತಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದರೂ ಜನಪ್ರತಿನಿಧಿಗಳು ಕ್ಯಾರೇ ಅನ್ನುತ್ತಿಲ್ಲ. ಸ್ಥಳೀಯ ಕಾರ್ಪೋರೇಟರ್, ಮೇಯರ್ ಕೂಡಾ ಸರಿಯಾಗಿ ಸ್ಪಂದಿಸುತ್ತಿಲ್ಲ. ಇನ್ನು ಇಲ್ಲಿನ ಕಾಮಗಾರಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪಂಪ್ವೆಲ್ನಿಂದ ಕರಾವಳಿ ವೃತ್ತವನ್ನು ಸಂಪರ್ಕಿಸುವ ರಸ್ತೆ ಕೂಡಾ ಸಂಪೂರ್ಣ ದುರಸ್ತಿಯಲ್ಲಿದೆ. ಅತ್ತ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಪಕ್ಕದಿಂದಲೂ ಪಂಪ್ವೆಲ್ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಸಂಚರಿಸದ ಸ್ಥಿತಿಯಲ್ಲಿ ಜನತೆ ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೊಂಡ ತುಂಬಿದ ರಸ್ತೆಗಳಿಂದ ದ್ವಿಚಕ್ರ ವಾಹನ ಅಪಘಾತಕ್ಕೆ ಒಳಗಾದ ಉದಾಹರಣೆ ಬಹಳಷ್ಟಿದೆ. ಆದರೆ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದರು. ಇನ್ನು ಪ್ರತಿಭಟನೆಯಲ್ಲಿ ಮಂಗಳೂರಿನ ಹಿರಿಯ ವಕೀಲ, ಸಾಮಾಜಿಕ ಹೋರಾಟಗಾರ ಎಸ್.ಪಿ.ಚೆಂಗಪ್ಪ ಉಪಸ್ಥಿತರಿದ್ದರು.