ಮಂಗಳೂರು, ಸೆ14(SS): ಐದು ವರ್ಷಗಳ ಕಾಲ ಸರಕಾರವನ್ನು ಯಾರೂ ಅಲುಗಾಡಿಸುವುದಕ್ಕೆ ಆಗಲ್ಲ. ಬಿಜೆಪಿ ಶಾಸಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಯಾಗದ ಮೊರೆ ಹೋಗಿದ್ದಾರೆ. ಯಡಿಯೂರಪ್ಪರ ಯಾವ ಪೂಜೆಯ ಫಲವೂ ಫಲಿಸಲ್ಲ. ಅವರು ಇದೇ ರೀತಿ ತೀರ್ಥಯಾತ್ರೆಗೆ ತೆರಳುತ್ತಿರಬೇಕಾಗುತ್ತದೆ. ಬೇರೆ ಏನೂ ಲಾಭವಿಲ್ಲ. ಐದು ವರ್ಷಗಳ ಕಾಲ ಸರಕಾರವನ್ನು ಯಾರೂ ಅಲುಗಾಡಿಸುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಯಾವ ಸಂದರ್ಭದಲ್ಲಿ ಫೀಲ್ಡ್ಗೆ ಇಳಿಸಬೇಕೆಂದು ಬಿಜೆಪಿಯವರ ನಡವಳಿಕೆ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ -ಜೆಡಿಎಸ್ ಶಾಸಕರು ಯಾರೂ ಅವರ ಸಂಪರ್ಕದಲ್ಲಿಲ್ಲ. ಇದ್ದಿದ್ದರೆ ಈಗಾಗಲೇ ಶೋ ಮಾಡುತ್ತಿದ್ದರು. ಶೋ ಮಾಡುವುದಕ್ಕೆ ಆಗದಿರುವುದರಿಂದ ಯಡಿಯೂರಪ್ಪ ತೀರ್ಥ ಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಂಗಳೂರು ಹೊರವಲಯದ ಹರೇಕಳದಿಂದ ಅಡ್ಯಾರ್ ವರೆಗೆ ಸೇತುವೆ, ಕಿಂಡಿ ಅಣೆಕಟ್ಟು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ಧರಾಮಯ್ಯ 174 ಕೋಟಿ ರೂ. ಬಜೆಟ್ ನಲ್ಲಿರಿಸಿದ್ದರು. ಈ ಬಗ್ಗೆ ಸಿಎಂ ಜತೆ ಮಾತನಾಡಿ ಯೋಜನೆಗೆ ವ್ಯಯಿಸಲಾಗುತ್ತಿದೆ. ಈಗಾಗಲೇ ಸ್ಥಳಪರಿಶೀಲನೆ ನಡೆಸಲಾಗಿದೆ. ಪಶ್ಚಿಮದಿಕ್ಕಿಗೆ ಹರಿಯುವ ನೀರನ್ನು ತಡೆದು ಉಪ್ಪು ನೀರಿಗೆ ಸೇರದಂತೆ ತಡೆದು ಕಾಮಗಾರಿ ಮಾಡಲಾಗಿದೆ. ಅಂತರ್ಜಲ ಹೆಚ್ಚಿಸುವುದಲ್ಲದೇ, ರೈತರಿಗೆ ನೀರು ಒದಗಿಸುವುದು ಇದರ ಉದ್ದೇಶ ಎಂದು ಹೇಳಿದರು.