ಸುಳ್ಯ, ಸೆ 14(SM): ನ್ಯಾಯಾಲಯಕ್ಕೆ ಹಾಜರಾಗಿ ಮರಳುತ್ತಿದ್ದ ಸಂದರ್ಭ ಆರೋಪಿಯೋರ್ವ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ವಶದಲ್ಲಿದ್ದ ಅಜ್ಜಾವರ ಗ್ರಾಮದ ಅಬ್ದುಲ್ ಅಝೀಝ್ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿದ ಆರೋಪಿ. ಕಾಞಂಗಾಡಿನ ಸಬ್ ಜೈಲಿನಲ್ಲಿದ್ದ ಈತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಪೊಲೀಸರೊಂದಿಗೆ ಹಾಜರಾಗಿದ್ದ. ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ವಾಪಾಸು ತೆರಳುವ ವೇಳೆ ಪೊಲೀಸರ ಕಣ್ಣು ತಪ್ಪಿಸಿ ಆತ ಪರಾರಿಯಾಗಿದ್ದಾನೆ.
ಉಪ್ಪಿನಂಗಡಿಯಲ್ಲಿ ಮಹಿಳೆಯ ಕೊಲೆ, ಕಾಸರಗೋಡು ಚೆಂಬರಿಕದ ವೃದ್ಧ ಮಹಿಳೆಯ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿ, ಕಾಸರಗೋಡಿನ ಕಾಞಂಗಾಡ್ ಸಬ್ ಜೈಲಿನಲ್ಲಿ ಬಂಧಿತನಾಗಿದ್ದ. ಈ ಹಿಂದೆ ಸುಳ್ಯ ಬಿ.ಎಸ್.ಎನ್.ಎಲ್ ಕಚೇರಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೂ ಈತನೆ ಎನ್ನಲಾಗಿದೆ. ಈ ಹಿನ್ನೆಲೆ ಕೇರಳ ಪೊಲೀಸರು ಆರೋಪಿಯನ್ನು ವಿಚಾರಣೆಗೆಂದು ಸುಳ್ಯ ನ್ಯಾಯಾಲಯಕ್ಕೆ ಕರೆ ತಂದಿದ್ದರು. ವಿಚಾರಣೆ ಬಳಿಕ ಪುನಃ ಕೊಂಡೊಯ್ಯುವ ವೇಳೆ ಈತ ಸುಳ್ಯ ಬಸ್ ನಿಲ್ದಾಣದ ಶೌಚಾಲಯಕ್ಕೆಂದು ತೆರಳಿದ್ದು ಅಲ್ಲಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸುಳ್ಯ ಪೊಲೀಸರು ಕಾರ್ಯಪ್ರವೃತರಾಗಿದ್ದು ಹುಡುಕಾಟ ನಡೆಸುತ್ತಿದ್ದಾರೆ.