ನವದೆಹಲಿ, ಸೆ15(SS): ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದ್ದು, ತೈಲೋತ್ಪನ್ನಗಳ ದರ ಸಾರ್ವಕಾಲಿಕವಾಗಿ ಗರಿಷ್ಠ ಮಟ್ಟ ತಲುಪಿದೆ. ತೈಲ ಬೆಲೆ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಲಕ್ಷಣಗಳ ಕಾಣಿಸುತ್ತಿಲ್ಲ. ಪ್ರತಿನಿತ್ಯವೂ ಬೆಲೆ ಏರಿಕೆಯಾಗುತ್ತಿದ್ದು, ಶನಿವಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ.
ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 35 ಪೈಸೆಯಷ್ಟು ಹೆಚ್ಚಾಗಿದೆ. ಒಂದು ಲೀಟರ್ ಪೆಟ್ರೋಲ್ಗೆ 81.63 ರೂ. ತೆರಬೇಕಾಗಿದೆ. ಡೀಸೆಲ್ ದರದಲ್ಲಿ 24 ಪೈಸೆ ಏರಿಕೆಯಾಗಿದ್ದು, ಲೀಟರ್ಗೆ 73.54 ರೂ. ಇದೆ. ಈ ನಡುವೆ ಮುಂಬೈನಲ್ಲಿ ಶೀಘ್ರದಲ್ಲಿಯೇ ಪೆಟ್ರೋಲ್ ಬೆಲೆ ಶತಕದ ಗಡಿ ಮುಟ್ಟುವ ಸೂಚನೆ ಕಾಣಿಸುತ್ತಿದೆ. ಪೆಟ್ರೋಲ್ ಲೀಟರ್ಗೆ 89.01 ರೂ. ಮತ್ತು ಡೀಸೆಲ್ ಪ್ರತಿ ಲೀ.ಗೆ 78.07 ರೂಪಾಯಿಗೆ ತಲುಪಿದೆ.
ಬೆಂಗಳೂರಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಪೆಟ್ರೋಲ್ ಬೆಲೆ 84.39 ರೂ. ಇದ್ದರೆ, ಡೀಸೆಲ್ ಬೆಲೆ 76 ರೂ.ಗೆ ಹೆಚ್ಚಳವಾಗಿದೆ. ಭಾರತ್ ಪೆಟ್ರೋಲಿಯಂನಲ್ಲಿ ಪೆಟ್ರೋಲ್ 84.36 ಮತ್ತು ಡೀಸೆಲ್ 75.96 ದರವಿದೆ. ಇಂಡಿಯನ್ ಆಯಿಲ್ನಲ್ಲಿ ಪೆಟ್ರೋಲ್ ಬೆಲೆ ಶನಿವಾರ 84.30 ರೂ. ಹಾಗೂ ಡೀಸೆಲ್ ಬೆಲೆ 75.91 ರೂ. ಮುಟ್ಟಿದೆ.
ಒಟ್ಟಾರೆ ಗಗನದತ್ತ ಮುಖ ಮಾಡಿರುವ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.