ಬಂಟ್ವಾಳ, ಸೆ15(SS): ಕರಾವಳಿಯಲ್ಲಿ ಪೊಲೀಸರ ಕಣ್ಗಾವಲು ಬಿಗಿಯಾಗಿದ್ದರೂ ಕೊಲೆ, ಕೊಲೆ ಯತ್ನದಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ವಿಟ್ಲದ ಕನ್ಯಾನದಲ್ಲಿ ನಿನ್ನೆ ತಡರಾತ್ರಿ ನಡೆದಿರುವ ಘಟನೆ.
ವಿಟ್ಲ ಸಮೀಪದ ಕನ್ಯಾನದ ಕೆಳಗಿನ ಪೇಟೆಯಲ್ಲಿ ಮಿತ್ತನಡ್ಕದ ನಿವಾಸಿ ನವಾಫ್ (23) ಎಂಬಾತನನ್ನು ಅಟ್ಟಾಡಿಸಿ ಕೊಲೆ ಮಾಡುವ ಯತ್ನವನ್ನು ಕಿಡಿಗೇಡಿಗಳು ಮಾಡಿದ್ದಾರೆ.
ಕನ್ಯಾನದ ಕುಖ್ಯಾತ ಕ್ರಿಮಿನಲ್ ಹಾಗೂ ಕೇರಳ ಮೂಲದ ಇಬ್ಬರಿಂದ ಯುವಕನನ್ನುಅಟ್ಟಾಡಿಸಿಕೊಂಡು ರಾಡ್ ನಿಂದ ಬಡಿದು ಕೊಲೆ ಮಾಡುವ ಯತ್ನ ನಡೆದಿದೆ ಎನ್ನಲಾಗಿದೆ. ನವಾಫ್ ತಡರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಕನ್ಯಾನದ ಇಕ್ಕು ಯಾನೆ ಇಕ್ಬಾಲ್, ಹರೀಶ್ ಹಾಗೂ ಕೇರಳದ ಇಬ್ಬರು ಸೇರಿಕೊಂಡು ಆಲ್ಟೋ 800 ಕಾರಿನಲ್ಲಿ ಮಾರಕಾಸ್ತ್ರಗಳ ಸಮೇತ ಬಂದು, ಏಕಾಏಕಿ ಮಾರಕಾಸ್ತ್ರಗಳಿಂದ ನವಾಫ್ ಮೇಲೆ ಹಲ್ಲೆ ನಡೆಸಿದ್ದಾರೆ.
ನವಾಫ್ ಅಪಾಯದಿಂದ ಪಾರಾಗಿದ್ದು, ಸ್ಥಳೀಯರು ಅವನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.