ಮಂಗಳೂರು ಸೆ15(SS): ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಫಾ.ಪೀಟರ್ ಪೌಲ್ ಸಲ್ಡಾನಾ ಅವರನ್ನು ವ್ಯಾಟಿಕನ್ ನೇಮಕ ಮಾಡಿದ್ದು, ಇಂದು ಮಂಗಳೂರು ಪ್ರಾಂತ್ಯದ 14ನೇ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂಜಾನೆ ವೇಳೆ ಫಾ.ಪೀಟರ್ ಪೌಲ್ ಸಲ್ಡಾನಾ ಅವರ ದೀಕ್ಷೆ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮ ಸಂಭ್ರಮದಿಂದ ನಡೆದಿದೆ.
ನಗರದ ರೊಸಾರಿಯೋ ಕ್ಯಾಥೆಡ್ರಲ್ ನಲ್ಲಿ ಮುಂಜಾನೆ ನಡೆದ ಬಲಿಪೂಜೆಯ ಧಾರ್ಮಿಕ ವಿಧಿವಿಧಾನದಲ್ಲಿ ವಂ. ಪೀಟರ್ ಪಾವ್ಲ್ ಸಲ್ಡಾನಾ ಅವರಿಗೆ ಬಿಷಪ್ ದೀಕ್ಷೆ ಹಾಗೂ ಪಟ್ಟಾಭಿಷೇಕ ನೆರವೇರಿಸಲಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಪಟ್ಟಾಭಿಷೇಕಾ ಕಾರ್ಯಕ್ರಮ ನೆರವೇರಿಸಿ ಅಧಿಕಾರ ವಹಿಸಿಕೊಟ್ಟಿದ್ದಾರೆ.
ಧಾರ್ಮಿಕ ವಿಧಿಯಲ್ಲಿ ೧15ಕ್ಕೂ ಅಧಿಕ ಬಿಷಪ್, 100ಕ್ಕೂ ಅಧಿಕ ಧರ್ಮಗುರುಗಳು ಹಾಗೂ ಧರ್ಮ ಭಗಿನಿಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಕೆಥೋಲಿಕರು ಅಭೂತಪೂರ್ವ ಸಮಾರಂಭದ ಯಶಸ್ಸಿಗೆ ಸಾಕ್ಷಿಯಾಗಿದ್ದಾರೆ. ಧರ್ಮಾಧ್ಯಕ್ಷರ ಪಟ್ಟಾಭಿಷೇಕ ಕಾರ್ಯಕ್ರಮದ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ್ದಾರೆ.
ರೋಮ್ ಪೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾಲಯದಲ್ಲಿ ದೇವತಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿರುವ ಅತೀ ವಂ.ಡಾ.ಪೀಟರ್ ಸಲ್ಡಾನಾ ಅವರನ್ನು ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಪೋಪ್ ಫ್ರಾನ್ಸಿಸ್ ಅವರು ನೇಮಕ ಮಾಡಿದ್ದರು. ಕಿರೆಂ ಚರ್ಚ್ ವ್ಯಾಪ್ತಿಯ ಅತೀ ವಂ. ಪೀಟರ್ ಜನಿಸಿದ್ದು ಎಪ್ರಿಲ್27, 1964ರಂದು. ಮೇ 6, 1991ರಂದು ಗುರು ದೀಕ್ಷೆ ಪಡೆದು ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಹಾಗೂ ಮಂಗಳೂರಿನ ಮಿಲಾಗ್ರಿಸ್, ವಿಟ್ಲ ಚರ್ಚುಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಇವರಿಗಿದೆ.
ಈ ಹಿಂದೆ ಉನ್ನತ ವ್ಯಾಸಂಗಕ್ಕಾಗಿ ರೋಮ್ ಗೆ ತೆರಳಿದ್ದ ಇವರು, ಅಲ್ಲಿನ ಪೊಂತಿಫಿಕಲ್ ಅರ್ಬನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದು, ಅಲ್ಲಿಯೇ ಪ್ರಾಧ್ಯಾಪಕರಾಗಿ ಬಹು ದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದರು. ಇದೀಗ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ದೀಕ್ಷೆ ಮತ್ತು ಪಟ್ಟಾಭಿಷೇಕ ಸ್ವೀಕರಿಸಿದ್ದಾರೆ.