ಮಂಗಳೂರು, ಸೆ 15(SM): ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಂಗಳೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಪಿಡಿಓಗಳು ಇಒ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೆಪ್ಟೆಂಬರ್ 15ರ ಶನಿವಾರ ಸಂಜೆ ನಡೆದಿದೆ. ಈ ಬಗ್ಗೆ ಪಿಡಿಒಗಳು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿಯವರಿಗೆ ದೂರು ನೀಡಿದ್ದರು. ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುತ್ತಿಗೆ ಹಾಕಿದ ಮಾಹಿತಿ ತಿಳಿದು ಸ್ಥಳಕ್ಕೆ ಧಾನಿಸಿದ ಶಾಸಕ ಭರತ್ ಶೆಟ್ಟಿ ಮುಂದೆಯೇ ಕಾರ್ಯನಿರ್ವಹಣಾಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸದಾನಂದ ಎಂಬವವರೇ ಲಂಚದ ಬೇಡಿಕೆ ಇಟ್ಟಿದ್ದಾರೆ. ಗ್ರಾಮ ಪಂಚಾಯತ್ ಬಜೆಟ್ ಹಣ ಬಿಡುಗಡೆಗೆ ಹಣಕಾಸು ಇಲಾಖೆಗೆ ಲಂಚ ಕೊಡಬೇಕೆಂದು ಸದಾನಂದ ಬೇಡಿಕೆ ಇಟ್ಟಿದ್ದರು ಎಂಬುದಾಗಿ ಪಿಡಿಒಗಳು ಆರೋಪಿಸಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಭರತ್ ಶೆಟ್ಟಿಯವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಶಾಸಕರನ್ನು ಲೆಕ್ಕಿಸದೆ ತನ್ನನ್ನು ಸಮರ್ಥಿಸಿಕೊಂಡ ಕಾರ್ಯನಿರ್ವಹಣಾಧಿಕಾರಿ, ಹಣಕಾಸು ಇಲಾಖೆಗೆ ದಸ್ತಾವೇಜುಗಳನ್ನು ಕಳುಹಿಸಲು ಹಣ ಪಾವತಿಸಬೇಕು. ಅವರಗೆ ನೀಡಲು ಹಣದ ಅಗತ್ಯವಿದೆ ಎಂದು ತಿಳಿಸಿದ್ದಾರೆ.