ಮಂಗಳೂರು, ಸೆ 15(SM): ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನಿಯೋಜನೆಗೊಂಡ ವಂ. ಡಾ| ಪೀಟರ್ ಪಾವ್ಲ್ ಸಲ್ಡಾನಾ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಇಂದು ಅದ್ದೂರಿಯಿಂದ ಜರುಗಿದೆ. ಧಾರ್ಮಿಕ ಸಮಾರಂಭದ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಹಾಜರಿದ್ದು ನೂತನ ಬಿಷಪ್ ಅವರಿಗೆ ಅಭಿನಂದಿಸಿದರು.
ಸಮಾರಂಭದಲ್ಲಿ ಹಾಜರಿದ್ದ ಗಣ್ಯಾತಿಗಣ್ಯರು ಬಿಷಪ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ನಳಿನ್ಕುಮಾರ್ ಕಟೀಲು, ಸಚಿವ ಯು ಟಿ ಖಾದರ್, ಮಾಜಿ ಶಾಸಕರಾದ ಎನ್ ಯೋಗೀಶ್ ಭಟ್, ಜೆ ಆರ್ ಲೋಬೋ , ಶಾಸಕ ವೇದವ್ಯಾಸ್ ಕಾಮತ್ ಮೊದಲಾದ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿರ್ಗಮನ ಬಿಷಪ್ ಅಲೋಶಿಯಸ್ ಪಾವ್ಲ್ ಡಿ ಸೋಜ ನಿರ್ಗಮನ ಭಾಷಣ ಮಾಡಿದರು.
ಇನ್ನು ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಮಾರಂಭವನ್ನುದ್ದೇಶಿಸಿ ಚೊಚ್ಚಲ ಭಾಷಣ ಆರಂಭಿಸಿದ ಡಾ. ಪೀಟರ್ ಸಲ್ಡಾನಾ, ‘ದೇವರ ಮಹಿಮಾ ಭರಿತ ಅನುಗ್ರಹದ ಸ್ತುತಿಗಾಗಿ ಎನ್ನುವ ದ್ಯೇಯ ವಾಕ್ಯದೊಂದಿಗೆ ದೇವರ ಅನುಗ್ರಹ ಪ್ರತಿಯೊಬ್ಬರಲ್ಲೂ ಕಾರ್ಯ ನಿರತವಾಗಿದೆ. ಹಾಗೂ ಅದೇ ದೇವರ ಆತ್ಮ ಜಾತಿ, ಧರ್ಮ ವಿಭಿನ್ನರಾದ ನಮ್ಮೆಲ್ಲರನ್ನು ಒಟ್ಟು ಸೇರಿಸಿದೆ ಎನ್ನುವ ಸತ್ಯಕ್ಕೆ ನಾವೆಲ್ಲರೂ ಸಾಕ್ಷಿಗಳು. ಇದು ಸಾವಿಗಿಂತಲೂ ಪ್ರೀತಿ ಹೆಚ್ಚು ಶಕ್ತಿಶಾಲಿ ಎಂದು ತೋರಿಸುತ್ತದೆ. ಪ್ರೀತಿ ಎಲ್ಲ ಸಿದ್ಧಾಂತಗಳಿಂದ ಶಕ್ತಿಯುತವಾದದ್ದು. ಹಾಗೂ ಬೇರ್ಪಡಿಸುವ ಎಲ್ಲಾ ಗೋಡೆಗಳಿಗಿಂತ ಎತ್ತರವಾದದ್ದು. ದೇವ ಸ್ವರೂಪಿಯಾಗಿರುವ ಪ್ರತಿಯೊಬ್ಬ ಮನುಷ್ಯನನ್ನು ನಾವು ಗೌರವಿಸಬೇಕು. ಪ್ರತಿಯೊಬ್ಬರನ್ನು ಪ್ರೀತಿಸಿ ಗೌರವಿಸಬೇಕಾದ ಮಹಾನ್ ಕರೆ ದೇವರಿಂದ ಪ್ರತಿಯೊಬ್ಬನಿಗೂ ಲಭಿಸಿದೆ’ ಎಂದು ಧರ್ಮಾಧ್ಯಕ್ಷರು ಆಶಿರ್ವಚನ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ತುಳುವಿನಲ್ಲಿ ಮಾತನಾಡುವ ಮೂಲಕ ಬಿಷಪ್ ಸಲ್ಡಾನಾ ನೆರೆದವರ ಮನಗೆದ್ದರು.