ಕಾಸರಗೋಡು, ಸೆ 15(SM): ಕೇರಳ ಮುಖ್ಯಮಂತ್ರಿಯವರ ನೆರೆ ಪರಿಹಾರ ನಿಧಿಗೆ ಕಂದಾಯ ಸಚಿವ ಇ. ಚಂದ್ರಶೇಖರನ್ ನೇತೃತ್ವದಲ್ಲಿ ಸೆಪ್ಟೆಂಬರ್ 15ರ ಶನಿವಾರ ಮಂಜೇಶ್ವರ ಮತ್ತು ಹೊಸದುರ್ಗ ತಾಲೂಕಿನಲ್ಲಿ ಧನಸಂಗ್ರಹ ಅಭಿಯಾನ ನಡೆಯಿತು. ಅಭಿಯಾನದ ಮೂಲಕ 1, 71 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರೊದಿಗೆ ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸಂಗ್ರಹವಾದ ಮೊತ್ತ 2.56 ಕೋಟಿ ರೂಪಾಯಿಗೆ ತಲುಪಿದೆ.
ವೆಳ್ಳರಿಕುಂಡು, ಹೊಸದುರ್ಗ, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಧನಸಂಗ್ರಹ ನಡೆಸಲಾಯಿತು. ಕಾಸರಗೋಡು ಮತ್ತು ವೆಳ್ಳರಿಕುಂಡು ತಾಲೂಕುಗಳಲ್ಲಿ ನಡೆಸಿದ ಅಭಿಯಾನದಲ್ಲಿ 84,74,127 ರೂಪಾಯಿ ಸಂಗ್ರಹವಾಗಿದೆ. ಶನಿವಾರ ಹೊಸದುರ್ಗ ತಾಲೂಕಿನಲ್ಲಿ 1,18,391 ರೂಪಾಯಿ ಮತ್ತು ಮಂಜೇಶ್ವರದಲ್ಲಿ 53,53,140 ರೂಪಾಯಿ ಲಭಿಸಿದೆ. ಮಂಜೇಶ್ವರ ತಾಲೂಕು ಧನ ಸಂಗ್ರಹ ಅಭಿಯಾನ ಉಪ್ಪಳದಲ್ಲಿರುವ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯಿತು. ಕಂದಾಯ ಸಚಿವ ಇ. ಚಂದ್ರಶೇಖರನ್ ಚಾಲನೆ ನೀಡಿದರು. ಶಾಸಕ ಪಿ.ಬಿ. ಅಬ್ದುಲ್ ರಜಾಕ್, ಸರಕಾರದ ವಿಶೇಷ ಪ್ರತಿನಿಧಿ ಕೆ . ಗೋಪಾಲ ಕೃಷ್ಣ ಭಟ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು, ಕಂದಾಯ ಅಧಿಕಾರಿ ಅಬ್ದುಲ್ ಸಮದ್ ಹಾಗೂ ಇತರ ಅಧಿಕಾರಿಗಳು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.