ಬಂಟ್ವಾಳ, ಸೆ 16 (MSP): ತಾಲೂಕಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಯಲ್ಲಿ ಅನಾಥೆ ವೃದ್ದೆಯ ಕತ್ತಲ ಬದುಕಿನಲ್ಲಿ ಬೆಳಕು ಮೂಡುವ ಭರವಸೆ ಸಿಕ್ಕಿದೆ..ಇಷ್ಟೇ ಅಲ್ಲದೆ ಹೊಗೆಮುಕ್ತ ಬದುಕು ಸಿಗುವ ಆಶ್ವಾಸನೆಯೂ ಸಿಕ್ಕಿದೆ. ಅನಾಥ ವೃದ್ದೆಯ ಕಷ್ಟಕ್ಕೆ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸ್ಪಂದಿಸಿದ್ದಾರೆ. ಬಂಟ್ವಾಳ ಭದ್ರಾ ಗ್ಯಾಸ್ ಏಜೆನ್ಸಿಯ ಮಾಲಕರು ಆದ ಮಂಜುನಾಥ ಆಚಾರ್ಯ ಅವರು ಸೆ. 17 ರ ಸೋಮವಾರ ಒಂಟಿ ವೃದ್ದೆ ಪೊಡಿ ಮುಗೇರ್ತಿಯ ನಿವಾಸಕ್ಕೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಹಾಗೂ ಸೋಲಾರ್ ವಿದ್ಯುತ್ ಅಳವಡಿಸುವ ಭರವಸೆಯನ್ನು ಬಂಟ್ಚಾಳ ನಗರ ಪೊಲೀಸ್ ಠಾಣೆಯ ಎಸ್ ಐ ಚಂದ್ರಶೇಖರ್ ಅವರ ಮೂಲಕ ಭರವಸೆ ನೀಡಿದ್ದಾರೆ. ಎಸ್. ಐ.ಚಂದ್ರಶೇಖರ್ ಅವರು ಸಾಮಾಜಿಕ ಕಳಕಳಿಯ ವರದಿ ಹಾಗೂ ರೋಟರಿಕ್ಲಬ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ನಿವಾಸಿ ದಿ.ಕುಕ್ಕ ಮುಗೇರ ಅವರ ಪತ್ನಿ ಪೊಡಿ ಮುಗೇರ್ತಿ (67) ಅವರು ವಿದ್ಯುದ್ದೀಪವಿಲ್ಲದೆ ಕತ್ತಲ ಕೋಣೆಯಲ್ಲಿದ್ದಾರೆ. ಸೌಧೆಯ ದೀಪ, ಚಿಮಿಣಿ ರಾತ್ರಿ ಕಳೆಯುವ ದೀಪ .ಪರಿಶಿಷ್ಟ ಜಾತಿಗೊಳಪಟ್ಟ ಪೋಡಿ ಮುಗೇರ್ತಿ ಒಂಟಿ ಜೀವ. ಇವರ ಗಂಡ ಕುಕ್ಕ ಮುಗೇರ ಅನಾರೋಗ್ಯಕ್ಕೆ ತುತ್ತಾಗಿ ಹತ್ತು ವರ್ಷದ ಹಿಂದೆಯೇ ನಿಧನರಾಗಿದ್ದರೆ, ಸದ್ಯ ಈಕೆಗೆ ತನ್ನ ಬಂದು,ಬಳಗ ಎಂಬುದು ಯಾರು ಇಲ್ಲ.
ಈ ಗ್ರಾಮದ ಬೀಟ್ ಪೋಲೀಸರಾದ ಮೋಹನ್ ಮತ್ತು ಮಲ್ಲಿಕಾ ಅವರು ಬೀಟ್ ರೌಂಡ್ಸ್ ನಲ್ಲಿದ್ದಾಗ ಒಂಟಿ ವೃದ್ದೆಯ ಬದುಕು ಕಂಡು ಮರುಕ ಪಟ್ಟರು. ತಕ್ಷಣ ಅವರು ಈ ವಿಚಾರವನ್ನು ನಗರ ಠಾಣೆ ಯ ಎಸ್.ಐ.ಚಂದ್ರಶೇಖರ ಅವರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸ್ಪಂದಿಸಿ ಅವರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.