ದುಬೈ, ಸೆ 16(SM): ದುಬೈಯ ಮಾರ್ಗದೀಪ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 4ನೇ ವರುಷದ ಸಾರ್ವಜನಿಕ ಗಣೇಶೋತ್ಸವ ಇತ್ತೀಚಿಗೆ ಆಚರಿಸಲಾಯಿತು. ನಗರದ ಅಜ್ಮಾನ್ ಯೂತ್ ಸೆಂಟರಿನ ಭವ್ಯ ಸಭಾಂಗಣದಲ್ಲಿ ಶ್ರೀ ಗಣೇಶ ವಿಗ್ರಹವನ್ನು ಅಲಂಕೃತವಾದ, ಅದ್ದೂರಿ ಮೆರವಣಿಗೆಯೊಂದಿಗೆ ತಂದು ಪ್ರತಿಷ್ಠಾಪಿಸಲಾಯಿತು.
ಮಂಗಳೂರಿನ ಉತ್ತರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮತ್ತು ಮಂಗಳೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ, ಲಯನ್ಸ್ ಕ್ಲಬ್ ಮಂಗಳೂರು ಇದರ ಮಾಜಿ ಗವರ್ನರ್ ಜೆ. ಕೃಷ್ಣಾನಂದ ರಾವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜ ರಾಜೇಶ್ವರಿ ಭಜನಾ ತಂಡ ಹಾಗೂ ವಂಶಿ ಭಜನಾ ತಂಡ ಇವರಿಂದ ಭಕ್ತಿಪೂರ್ಣ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅತಿಥಿಗಳ ಉಪಸ್ಥಿತಿಯಲ್ಲಿ ಗಣಪತಿ ದೇವರಿಗೆ ಮಹಾ ಮಂಗಳಾರತಿಯೊಂದಿಗೆ ಪೂಜೆಯನ್ನು ಶಾಸ್ತ್ರ ಪ್ರಕಾರವಾಗಿ ನೆರವೇರಿಸಲಾಯಿತು. ಅನ್ನಪ್ರಸಾದದ ಬಳಿಕ ನಡೆದ ಭಕ್ತಿ ರಸ ಮಂಜರಿ ಕಾರ್ಯಕ್ರಮವು ರಾಮಕ್ಷತ್ರಿಯ ಸಮಾಜದ ಗಾಯಕಿ ಮಲ್ಲಿಕಾ ನರೇಂದ್ರ ಇವರು ನಡೆಸಿದರು. ಕಾರ್ಯಕ್ರಮದಲ್ಲಿ ಸಂತೋಷ್ ಕೆಮ್ಮಿಂಜೆ, ಹರೀಶ್ ಜಾಲಸತ್ತಿಗೆ ಮತ್ತಿತರ ಸ್ಥಳೀಯ ಕಲಾವಿದರು ಭಾಗವಹಿಸಿದ್ದರು.
ಬಳಿಕ ನಡೆದ ಸಭಾಕಾರ್ಯಕ್ರಮ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಇದರ ಅಧ್ಯಕ್ಷರಾದ ರಾಜೇಶ್ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಕಾರ್ಯಕ್ರಮದ ಆಯೋಜನೆಗೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದರು. ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯ ಮಾಡಿಸುವುದರ ಬಗೆಗಿನ ಮಹತ್ವದ ಬಗ್ಗೆ ಎಲ್ಲರಿಗೂ ಕಿವಿಮಾತನ್ನು ಹೇಳಿದರು. ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಪ್ರಭಾಕರ ಅಂಬಲ್ತೆರೆ, ಅಜಿತ್ ಕಾಸರಗೋಡ್ ಮತ್ತಿತರರು ಭಾಗವಹಿಸಿದ್ದರು. ಬಳಿಕ ಗಣಪತಿ ವಿಸರ್ಜನಾ ವಿಧಿ ವಿಧಾನಗಳನ್ನು ಕಾನೂನಿನ ಪರಿಧಿಯೊಳಗೆ ನೆರವೇರಿಸಲಾಯಿತು.