ವಿಜಯಪುರ, ಸೆ 16 (MSP):ಒಂದು ಹೊತ್ತು ಉಪವಾಸವಿರಬೇಕು ಅಂದ್ರೆ, ಅದೆಷ್ಟೋ ಮಂದಿ ಚಡಪಡಿಸುತ್ತಾರೆ ಅದರೆ ಇಲ್ಲಿ ಸುಮಾರು 25 ವರ್ಷದಿಂದ ಊಟನೇ ಮಾಡದೆ ಬದುಕು ನಡೆಸುವ ಮಹಿಳೆಯೊಬ್ಬರಿದ್ದಾರೆ ಎಂದರೆ ನಿಜಕ್ಕೂ ಮೂಗಿನ ಮೇಲೆ ಬೆರಳಿಡಲೇಬೇಕು. ಅನ್ನ- ಆಹಾರವನ್ನು ಸೇವಿಸದೇ ಲವಲವಿಕೆಯಿಂದಲೇ ಓಡಾಡಿಕೊಂಡಿರುವ ಈ ಮಹಿಳೆಯ ಹೆಸರು ಮಲ್ಲಮ್ಮ ಸಿದ್ದನಗೌಡ ಪಾಟೀಲ ಎಂದು. ವಯಸ್ಸು ಸುಮಾರು 53 ಇರಬಹುದು. ಈಕೆಯ ಊರು ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಶಿರೋಳ ಗ್ರಾಮ.
ಹಾಗೆಂದು ಇವರು ಯಾವುದನ್ನು ಕೂಡಾ ಸೇವಿಸೋದೆ ಇಲ್ಲ ಎಂದಲ್ಲ.. ಚಹಾ, ನೀರು ಹಾಗೂ ಎಲೆ-ಅಡಕೆ ಇವಿಷ್ಟೇ ಇವರ ಆಹಾರ ..ಇದನ್ನು ಬಿಟ್ಟರೇ ಅನ್ನ ರೊಟ್ಟಿ ಅಂದರೆ ಯಾಕೋ ದೂರ..ಮಲ್ಲಮ್ಮ ದಿನಪ್ರಂತಿ 2 ಹೊತ್ತು ಚಹಾ, ಎಲೆ-ಅಡಕೆ, ನೀರು ಮಾತ್ರ ಸೇವಿಸುತ್ತಾರೆ. ಯಾರಾದ್ರೂ ಊಟ ಮಾಡುವಂತೆ ಬಲವಂತ ಮಾಡಿದ್ರೆ, ಹೊಟ್ಟೆ ತುಂಬಿದೆ ಇನ್ನು ಹೇಗೆ ಊಟ ಮಾಡಲಿ ಎನ್ನುತ್ತಾರೆ. ಯಾಕೆ ನೀವು ಊಟ ಮಾಡಲ್ಲ ಎಂದು ಮಲ್ಲಮ್ಮ ಅವರನ್ನು ಪ್ರಶ್ನಿಸಿದ್ರೆ," 25 ವರ್ಷ ಹಿಂದೆ ಕಂದನ ಆಗಮನದ ನಿರೀಕ್ಷೆಯಲ್ಲಿದ್ದೆ ನಾನು. ಆದರೆ ನನ್ನ ಹೆರಿಗೆ ಸಂದರ್ಭದಲ್ಲಿ ಮಗು ಹೊಟ್ಟೆಯಲ್ಲೇ ಸಾವಿಗೀಡಾಯಿತು. ಇದರಿಂದ ಮಾನಸಿಕವಾಗಿ ಜರ್ಜತಿತವಾಗಿ ಊಟ ಮಾಡುವುದನ್ನು ಬಿಟ್ಟೆ’ ಎಂದು ಕಾರಣ ಹೇಳುತ್ತಾರೆ ಮಲ್ಲಮ್ಮ.
ಊಟ ಮಾಡೋದು ಬಿಡಿ 25 ವರ್ಷಗಳಿಂದ ಮಲ್ಲಮ್ಮ ಬಹಿರ್ದೆಸೆಗೆ ಹೋಗಿಲ್ಲವಂತೆ. ಯಾರೊಂದಿಗೂ ಹೆಚ್ಚು ಮಾತನಾಡದ ಇವರು ಯಾರಾದರೂ ಕರೆದರೂ ಮಾತನಾಡಿಸಿದರೆ ಕೇಳಿದಕ್ಕಷ್ಟೇ ಉತ್ತರ ಕೊಟ್ಟು ನಡೆದುಬಿಡುತ್ತಾರೆ. ಇವರ ಒಡನಾಟ ಏನಿದ್ದರೂ ನಾಲ್ಕೈದು ಮನೆಯವರೊಂದಿಗಷ್ಟೇ. ಅವರೂ ಕೂಡಾ ಮಲ್ಲಮ್ಮ ಊಟ ಮಾಡಿದ್ದನ್ನು ನೋಡಿಯೇ ಇಲ್ಲ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಊಟ ಮಾಡದಿರುವುದಕ್ಕೆ ಕಾರಣ ತಿಳಿದುಕೊಳ್ಳಲು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ತೋರಿಸಿದರೆ, ಈಕೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನುತ್ತಾರೆ ಎಂದು ಸಹೋದರಿ ಕಾಶಿಬಾಯಿ.