ಬೆಂಗಳೂರು, ಸೆ 16 (MSP): 12 ದಿನಗಳ ವಿದೇಶ ಪ್ರವಾಸದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಮರಳಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ಹೈಡ್ರಾಮಕ್ಕೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ದಿನಕ್ಕೊಂದು ವಿವಾದ. ಕ್ಷಣಕ್ಕೊಂದು ವದಂತಿ ಎಂಬ ರಾಜಕೀಯದ ಮೇಲಾಟದಲ್ಲಿ ಆಂತರಿಕ ಬಿಕ್ಕಟ್ಟು ಶಮನವಾಗುತ್ತಾ ಎನ್ನುವ ಪ್ರಶ್ನೆ ಕಾಡತೊಡಗಿದೆ.
ಈ ನಡುವೆ ಸರ್ಕಾರದ ಅಳಿವು ಉಳಿವಿನ ಬೇಗುದಿಯಲ್ಲಿ ಟೂರ್ ನಿಂದ ದಣಿದ ಸಿದ್ದು ವಿಶ್ರಾಂತಿ ತೆಗೆದುಕೊಳ್ಳದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬುಲಾವ್ ಮೇರೆಗೆ ಕಾವೇರಿಯಲ್ಲಿ ಆಗಮಿಸಿ ವೇಣುಗೋಪಾಲ್ ಜತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಉಪಸ್ಥಿತರಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸರ್ಕಾರ ಉಳಿದರೆ ಮತ್ತೆ ’ಕೈ’ ಉಳಿಸಿದ ಹೀರೋ ಆಗ್ತಾರಾ ಸಿದ್ದರಾಮಯ್ಯ ಅನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಅದ್ರೆ ಈ ಎಲ್ಲಾ ತೆರೆಮರೆಯ ಆಟದ ಹಿಂದೆ ಸಿದ್ದರಾಮಯ್ಯ ಅವರ ಪಾತ್ರವೂ ಇತ್ತು ಅನ್ನೋದು ಈಗ ಗುಟ್ಟಾಗಿ ಉಳಿದಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ವ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬಾದಮಿಯಲ್ಲಿ ಕೂದಲೆಳೆಯ ಅಂತರದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದ್ದ ಸಿದ್ದು ಪಕ್ಷದಲ್ಲಿ ತಮ್ಮ ವರ್ಚಸ್ಸನ್ನು ಕಳೆದುಕೊಂಡಿದ್ದರು. ಈಗ ಮತ್ತೆ ಸಿದ್ದು ನಿಧಾನವಾಗಿ ಪಕ್ಷದ ಮೇಲೆ ಹಿಡಿತ ಸಾಧಿಸುವಲ್ಲಿ ಸಫಲರಾಗುತ್ತಿದ್ದಾರೆ. ಪಕ್ಷದಲ್ಲಿ ತನ್ನ ಅನಿರ್ವಾಯತೆ ಏನೆಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಕೊಂಡೇ ಸಿದ್ದು ಹೆಜ್ಜೆ ಇಡುತ್ತಿದ್ದಾರೆ.