ಮಂಗಳೂರು, ಸೆ 16 (MSP): ಹಿಂದೂಗಳು ಶ್ರದ್ಧಾಭಕ್ತಿಯಿಂದ ಪೂಜಿಸುವ ಸಾರ್ವಜನಿಕ ಶ್ರೀ ಗಣಪತಿ ದೇವರಿಗೆ ಕ್ರೈಸ್ತ ಬಾಂಧವರು ಹೂ-ಹಣ್ಣುಹಂಪಲು ಅರ್ಪಿಸಿ ಧರ್ಮ ಸಾಮರಸ್ಯಕ್ಕೆ ಮುನ್ನುಡಿ ಬರೆದ ಅಪರೂಪದ ಘಟನೆ ಸೆ. 16 ರ ಭಾನುವಾರ ನಗರದಲ್ಲಿ ನಡೆಯಿತು.
ಆರೆಸ್ಸೆಸ್ ಕೇಂದ್ರ ಕಚೇರಿ, ಪ್ರತಾಪನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ 71 ನೇ ಸಾರ್ವಜನಿಕ ಗಣೇಶೋತ್ಸವದ ವೇಳೆ, ಆಗಮಿಸಿದ ಆಶೋಕ ನಗರದ ಸಿಸ್ಟರ್ಸ್ ಆಫ್ ಸೈಂಟ್ ಜೋಸೇಫ್ ಕಾನ್ವೆಂಟ್ ನ ಧರ್ಮ ಭಗಿನಿಯರಾದ , ಜ್ಯೋತಿ, ಅನಿತಾ, ರೋಸಾ,ಸುಜಾತ ಮುಂತಾದವರು ಗಣಪನಿಗೆ ವಂದಿಸಿ, ಹೂವು ಹಣ್ಣುಗಳನ್ನು ಅರ್ಪಿಸಿದರು. ಈ ಸಂದರ್ಭ ಕ್ಯಾಥಲಿಕಾ ಸಭಾ ದ ಕಾರ್ಯದರ್ಶಿ, ಸೆಲೆಸ್ಟಿನ್ ಡಿ ಸೋಜಾ ಹಾಗೂ ಕ್ಯಾಥಲಿಕ್ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕ್ರೈಸ್ತ ಧರ್ಮಭಗಿನಿಯರನ್ನು ಆಧಾರದಿಂದ ಸ್ವಾಗತಿಸಿದ ಸಾರ್ವಜನಿಕ ಗಣೇಶೋತ್ಸವ ಕಮಿಟಿ ಸದಸ್ಯರು, ಶ್ರೀ ಮಹಾ ಗಣಪನಿಗೆ ವಿಶೇಷ ಪೂಜೆಯ ಪ್ರಸಾದ ವಿತರಿಸಿದರು.
ಇದೇ ವೇಳೆ ಮಾತನಾಡಿದ ಕ್ಯಾಥಲಿಕಾ ಸಭಾ ದ ಕಾರ್ಯದರ್ಶಿ, ಸೆಲೆಸ್ಟಿನ್ ಡಿ ಸೋಜಾ, ಜಗತ್ತಿನಲ್ಲಿ ಧರ್ಮ ಸಾಮರಸ್ಯ ಅನಿವಾರ್ಯ. ಈ ಭೇಟಿಯೂ ಕೂಡಾ ಸಾಮರಸ್ಯ, ಸೌಹಾರ್ದತೆಯ ಸಂಕೇತವಾಗಿದೆ . ಸಾಮರಸ್ಯ ಬೆಳೆಯಲೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವ ಸಂಪ್ರದಾಯ ಗಟ್ಟಿಯಾಗಬೇಕು. ಎಲ್ಲೆಡೆ ಪ್ರೀತಿ, ಸಾಮರಸ್ಯದ ವಾತಾವರಣ ತುಂಬಿ ಬರಲಿ ಎಂದು ಹಾರೈಸಿದರು.