ಮುಜಫ್ಪರ್ನಗರ, ಸೆ17(SS): ಸುಮಾರು 26 ಕ್ಕೂ ಮಿಕ್ಕಿ ವರ್ಷಗಳಿಂದ ಮುಸ್ಲಿಂ ಸಮುದಾಯವೊಂದು ಹಿಂದು ದೇವಾಲಯವೊಂದರ ನಿರ್ವಹಣೆ, ರಕ್ಷಣೆಯ ಜವಾಬ್ದಾರಿ ನಿಭಾಯಿಸಿ ಸೌಹಾರ್ದತೆ ಮೆರೆಯುತ್ತಿದೆ.
ಮುಜಫ್ಪರ್ನಗರದ ಒಂದು ಕಿ.ಮೀ ದೂರವಿರುವ ಲದ್ದೇವಾಲ ಸಮೀಪ ಕಿರಿದಾದ ಗಲ್ಲಿಯೊಂದರಲ್ಲಿ ಕಳೆದ 26 ವರ್ಷಗಳಿಂದ ಮುಸ್ಲಿಮರು ದೇವಾಲಯವೊಂದರ ನಿರ್ವಹಣೆ, ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತಾ ಬಂದಿದ್ದಾರೆ. ಈ ಹಿಂದೆ ಇಲ್ಲಿ ಹಿಂದೂ ಕುಟುಂಬ ವಾಸವಾಗಿತ್ತು. ಆದರೆ 1990ರ ದಶಕದಲ್ಲಿ ಬಾಬರಿ ಮಸೀದಿ ಧ್ವಂಸ ಬಳಿಕ ಉದ್ಭವಿಸಿದ್ದ ಗಲಭೆಯ ಹಿನ್ನೆಲೆಯಲ್ಲಿ ಆ ಪ್ರದೇಶ ಬಿಟ್ಟು ತೆರಳಿತ್ತು.
ಇಲ್ಲಿ ಸುಮಾರು 35 ಮುಸ್ಲಿಂ ಕುಟುಂಬಗಳಿವೆ. ಸುತ್ತ 20 ಹಿಂದೂ ಕುಟುಂಬಗಳಿದ್ದವು. 1970ರಲ್ಲಿ ದೇಗುಲ ನಿರ್ಮಿಸಲಾಗಿತ್ತು. ಆದರೆ ಗಲಭೇ ಹಿನ್ನೆಲೆ ಹಿಂದು ಕುಟುಂಬಗಳು ಜಾಗ ಬಿಟ್ಟು ಹೋಗಿದ್ದು, ಅಲ್ಲಿರುವ ಮುಸ್ಲಿಮರು ಪ್ರತಿದಿನ ಆ ದೇಗುಲವನ್ನು ಸ್ವಚ್ಛಗೊಳಿಸುತ್ತಾರೆ.
ಸದ್ಯ ಅಲ್ಲಿರುವ ಮುಸ್ಲಿಮರು ಹಿಂದೂ ಕುಟುಂಬ ವಾಪಸಾಗಲಿ ಎಂದು ಬಯಸುತ್ತಿದ್ದು, ದೇಗುಲವನ್ನು ಅವರ ವಶಕ್ಕೆ ನೀಡಲು ತಯಾರಿದ್ದಾರೆ.