ಕುಂದಾಪುರ, ಅ 5: ಪ್ರತಿಷ್ಟಿತ "ಡಾ.ಕೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ" ಯನ್ನು ಖ್ಯಾತ ಚಿತ್ರನಟ ಪ್ರಕಾಶ್ ರೈಗೆ ನೀಡುತ್ತಿರುವುದಕ್ಕೆ ಕೋಟ ಭಾಗದಲ್ಲೇ ಅಪಸ್ವರವೆದ್ದಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದ್ದು. ಬಹುತೇಕರು ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲು ಪ್ರಕಾಶ್ ರೈ ಅರ್ಹರಲ್ಲ ಎಂದು ಹೋರಾಟ ನಡೆಸಲು ಸಿದ್ದಗೊಳ್ಳುತ್ತಿದ್ದಾರೆ. ಒಂದು ವೇಳೆ ಪ್ರಶಸ್ತಿಯನ್ನ ಅವರಿಗೆ ನೀಡಿದ್ದೇ ಆದರೆ ಅಂದು ಕಪ್ಪು ಪಟ್ಟಿ ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇತ್ತಿಚಿಗೆ ಡಿವೈಎಫ್ಐ ಸಮಾವೇಶದಲ್ಲಿ ಉತ್ತರಪ್ರದೇಶ ಸಿಎಂ ವಿರುದ್ಧ ಮಾತನಾಡಿದ್ದು ಹಾಗೂ ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹೇಳಿಕೆ ನೀಡಿರುವುದು ಈ ಅಪಸ್ವರ ಹುಟ್ಟಿಕೊಳ್ಳಲು ಒಂದು ಕಾರಣ ಎನ್ನಲಾಗುತ್ತಿದೆ. ನೇತ್ರಾವತಿ, ಕಸ್ತೂರಿ ರಂಗನ್, ಪಶ್ಚಿಮ ಘಟ್ಟ ಹೀಗೆ ಯಾವುದೇ ಪರಿಸರ ಪರ ಹೋರಾಟದಲ್ಲಿ ಭಾಗವಹಿಸದ ಪ್ರಕಾಶ್ ರೈ ಆಲಿಯಾಸ್ ಪ್ರಕಾಶ್ ರಾಜ್, ಪರಿಸರ ಪ್ರೇಮಿ ಕಾರಂತರ ಹೆಸರಿನ ಪ್ರಶಸ್ತಿ ಪಡೆಯಲು ಯಾವ ಲೆಕ್ಕದಲ್ಲಿ ಅರ್ಹರು ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದು ಮೂಲಗಳ ಪ್ರಕಾರ ಈ ವಿವಾದಕ್ಕೆ ಸ್ಥಳೀಯ ರಾಜಕೀಯ ಕಾರಣಗಳು ಇದೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿವಾದವನ್ನ ಹುಟ್ಟಿಸಿದವರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭಿಮಾನಿಗಳಳಲ್ಲಿ ಒಬ್ಬರು ಎನ್ನಲಾಗಿದ್ದು. ಡಾ. ಕೆ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನಸಮಾರಂಭದ ನೇತೃತ್ವವನ್ನ ವಹಿಸಿಕೊಂಡಿರುವುದು ಕೋಟ ಶ್ರೀನಿವಾಸ ಪೂಜಾರಿಯಾಗಿರುವುದರಿಂದ, ಈ ಘಟನೆ ಮುಖಾಂತರ ಪೂಜಾರಿಯವರಿಗೆ ಮುಜುಗರಪಡಿಸುವ ಉದ್ದೇಶವನ್ನ ಹೊಂದಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಒಟ್ಟಿನಲ್ಲಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ದತೆಗಳು ಪೂರ್ಣಗೊಂಡ ವಿವಾದ ಹುಟ್ಟಿರುವುದು ಕಾರ್ಯಕ್ರಮ ಸಂಘಟಕರಿಗೆ ನುಂಗಲಾರದ ತುತ್ತಾಗಿದೆ.