ಮಂಗಳೂರು, ಸೆ17(SS): ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಹೆಚ್ಚಾಗುತ್ತಿದ್ದು, ಇದಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆಯೇ ಕಾರಣ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ. ರಾಧಾಕೃಷ್ಣ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕರಾವಳಿಯ ಜಿಲ್ಲೆಯಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಬಹಳ ಅನ್ಯೋನ್ಯತೆ ಇತ್ತು. ಆದರೆ ನಳಿನ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆಯಿಂದ ದ.ಕ. ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ. ರಾಜಕೀಯ ಕಾರಣಕ್ಕಾಗಿ ಧರ್ಮವನ್ನು ನಡುವಿಗೆ ತಂದು ಹಾಳುಗೆಡಹುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದರಾದ ನಳಿನ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ಯುವಕರಲ್ಲಿ ಮತೀಯ ಭಾವನೆ ಬಿತ್ತಿ ಮತ್ತು ಪ್ರಚೋದಿಸಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿದ ಅವರು, ಮೋದಿ ಸರ್ಕಾರ ಯಾವ ಘೋಷಣೆಯನ್ನೂ ಕೂಡಾ ಯಥಾವತ್ತಾಗಿ ಅನುಷ್ಠಾನಗೊಳಿಸಿಲ್ಲ. ತೈಲ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ತಡೆಗಟ್ಟಲು ಮೋದಿ ಸರಕಾರಕ್ಕೆ ಆಗುತ್ತಿಲ್ಲ ಎಂದು ಟೀಕೆ ಮಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಸುಳ್ಳು ಹೇಳುತ್ತಾ ಮೋದಿ ಜನರನ್ನು ಮೋಸಗೊಳಿಸಿದ್ದಾರೆ. ಕೇಂದ್ರದ ಸಚಿವರಾದ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಕೂಡ ಸುಳ್ಳು ಹೇಳುತ್ತಿದ್ದಾರೆ. ಜನರನ್ನು ವಂಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕಿಡಿ ಕಾರಿದರು.