ಪುತ್ತೂರು, ಸೆ 17(SM): ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದ ಬಳಿಕ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದ ವಿಚಾರ ರೈತರ ಸಾಲ ಮನ್ನಾ. ಬಳಿಕದ ವಿವಿಧ ಬೆಳವಣಿಗೆಯ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ರೈತರು ಕೃಷಿಗಾಗಿ ಪಡೆದ ಸುಮಾರು ೧ ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದರು. ಘೋಷಣೆ ಮಾಡಿ ಹಲವು ತಿಂಗಳು ಕಳೆದರೂ, ಇದುವರೆಗೂ ಸಾಲಮನ್ನಾ ಕುರಿತಂತೆ ಸಮಗ್ರ ರೂಪುರೇಷೆ ಸಿದ್ಧಗೊಂಡಿಲ್ಲ.
ಯಾವ ರೀತಿಯಲ್ಲಿ ಸಾಲಮನ್ನಾ ಮಾಡಬೇಕು ಎನ್ನುವ ನಿರ್ದೇಶನವನ್ನು ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಗೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಸಾಲಮನ್ನಾ ವಿಷಯದಲ್ಲಿ ಸರಕಾರ ನೀಡಿದ ಸೂಚನೆ ಹಲವು ಗೊಂದಲಗಳಿಗೆ ಕಾರಣವಾಗಿದೆ. ಠೇವಣಿ ಇರುವವರಿಗೆ, ಇಲ್ಲದವರಿಗೆ ಹಾಗೂ ತೆರಿಗೆದಾರನಿಗೆ, ಉದ್ಯೋಗದಾತರ ವಿಚಾರವನ್ನು ಸಾಲಮನ್ನಾದ ಆದೇಶದಲ್ಲಿ ಸರಕಾರ ಉಲ್ಲೇಖಿಸಿದೆ. ಈ ಬಗ್ಗೆ ಮಾಹಿತಿಯನ್ನು ಹೇಗೆ ಪಡೆಯಬೇಕು ಎನ್ನುವ ಉಲ್ಲೇಖವನ್ನು ಮಾತ್ರ ಸರಕಾರ ಮಾಡಿಲ್ಲ. ಸರಕಾರದ ಈ ರೀತಿಯ ಗೊಂದಲದ ಸಾಲಮನ್ನಾ ಆದೇಶವನ್ನು ವಿರೋಧಿಸಿ ಇದೀಗ ಸಹಕಾರಿ ಸಂಘಗಳು ಬೀದಿಗಿಳಿದು ಹೋರಾಟ ನಡೆಸಲು ಪ್ರಾರಂಭಿಸಿವೆ.
ರಾಜ್ಯ ಸರಕಾರದ ಸಾಲಮನ್ನಾ ಘೋಷಣೆಯನ್ನು ನೋಡಿ ಬ್ಯಾಂಕ್ ಗಳಿಗೆ ತೆರಳಿದ ಕೃಷಿಕರಿಗೆ ನಿರಾಸೆ ಕಾಡುತ್ತಿದೆ. ಸರಕಾರ ಸಾಲಮನ್ನಾ ಮಾಡಿ ಆಯಾಯ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಗೆ ಆದೇಶವನ್ನು ಹೊರಡಿಸಿದೆ. ಆದರೆ ಸರಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಸಾಕಷ್ಟು ಗೊಂದಲವಿದೆ ಎನ್ನುವ ಆರೋಪ ಇದೀಗ ಸಹಕಾರಿ ಸಂಘಗಳಿಂದ ಕೇಳಿ ಬರಲಾರಂಭಿಸದೆ. ಒಂದು ಲಕ್ಷದವರೆಗಿನ ಸಾಲಮನ್ನಾ ಮಾಡಲಾಗಿದ್ದು, ಯಾರಿಗೆ ಸಾಲಮನ್ನಾ ಮಾಡಬೇಕು, ಯಾವ ಆಧಾರದ ಮೇಲೆ ಮಾಡಬೇಕು ಎನ್ನುವ ಸ್ಪಷ್ಟವಾದ ಮಾರ್ಗಸೂಚಿ ರಾಜ್ಯ ಸರಕಾರ ಕಳುಹಿಸಿದ ರಾಜಪತ್ರದಲ್ಲಿ ಉಲ್ಲೇಖಿಸಿಲ್ಲ. ಠೇವಣಿ ಇಟ್ಟವರಿಗೆ ಸಾಲಮನ್ನಾ ಇಲ್ಲ ಎನ್ನುವ ಆದೇಶದ ಜೊತೆಗೆ ತೆರಿಗೆ ಕಟ್ಟುವವರಿಗೆ ಸಾಲಮನ್ನಾ ಇಲ್ಲ ಎನ್ನುವ ಸೂಚನೆ ನೀಡಿದೆ. ಆದರೆ ಯಾವ ರೈತ ತೆರಿಗೆ ಕಟ್ಟುತ್ತಾನೆ, ಕಟ್ಟುವುದಿಲ್ಲ ಎನ್ನುವುದರ ಬಗ್ಗೆ ಸಹಕಾರಿ ಸಂಘಗಳು ಮಾಹಿತಿ ಹೇಗೆ ಸಂಗ್ರಹಿಸಬೇಕು ಎನ್ನುವುದರ ಬಗ್ಗೆ ಸಹಕಾರಿ ಸಂಘಗಳಲ್ಲಿ ಗೊಂದಲವಿದೆ. ಅಲ್ಲದೆ 20 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವ ಕುಟುಂಬಕ್ಕೂ ಸಾಲಮನ್ನಾ ಅನ್ವಯವಾಗುದಿಲ್ಲ ಎನ್ನುವ ಸೂಚನೆಯಿದ್ದು, ಯಾರು ಎಷ್ಟು ಸಂಬಳ ಪಡೆಯುತ್ತಾನೆ ಎನ್ನುವ ಮಾಹಿತಿ ಸಹಕಾರಿ ಸಂಘಗಳಿಗೆ ಹೇಗೆ ದೊರೆಯುತ್ತದೆ ಎನ್ನುವ ಗೊಂದಲವೂ ಕಾಡಲಾರಂಭಿಸಿದೆ.
ಸರಕಾರದ ಈ ಗೊಂದಲಮಯವಾದ ಸಾಲಮನ್ನಾ ಆದೇಶವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಇದೀಗ ಸಹಕಾರಿ ಸಂಘಗಳ ನೇತೃತ್ವದಲ್ಲಿ ಪ್ರತಿಭಟನೆಗಳು ಪ್ರಾರಂಭಗೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಹಕಾರ ಭಾರತಿ ನೇತೃತ್ವದಲ್ಲಿ ಈಗಾಗಲೇ ಪ್ರತಿಭಟನೆ ನಡೆದಿದೆ. ಇನ್ನೂ ಹಲವು ಸಂಘಟನೆಗಳು ಪ್ರತಿಭಟನೆಯ ಹಾದಿ ಹಿಡಿದಿದೆ. ಆದರೆ, ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದ ಸಿಎಂ ಹೆಚ್ ಡಿಕೆ, ಇದೀಗ ಹಲವಾರು ನಿರ್ಬಂಧಗಳನ್ನು ಜಾರಿಗೆ ತಂದಿರುವುದು, ರೈತರಲ್ಲಿ ಗೊಂದಲವನ್ನುಂಟು ಮಾಡಿದೆ.