ಮಂಗಳೂರು, ಸೆ18 (MSP): ಪಡೀಲ್ ಬಜಾಲ್ ಮುಖ್ಯರಸ್ತೆಯ ಜೆ.ಎಮ್ ರೋಡ್ ನಿಂದ ಪಕ್ಕಲಡ್ಕದವರೆಗೆ ರಸ್ತೆ ಕಾಂಕ್ರಿಟೀಕರಣಗೊಳಿಸಲು ಕಳೆದ ಮೂರು ತಿಂಗಳುಗಳಿಗಿಂತಲೂ ಅಧಿಕ ಸಮಯಗೊಂಡಿರುವುದು ದುರಂತ. ಈ ರಸ್ತೆ ನಿರ್ಮಿಸಲು ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಜನರ ಕಾಳಜಿಗಿಂತಲೂ ಕಮೀಷನ್ ಕಾಳಜಿಯೇ ಹೆಚ್ಚಾಗಿರುವುದರಿಂದ ರಸ್ತೆ ನಿರ್ಮಿಸುವಲ್ಲಿ ವಿಳಂಬವಾಗಿದೆ ಎಂದು ಡಿವೈಎಫ್ಐ ನ ಮಾಜಿ ರಾಜ್ಯಾದ್ಯಕ್ಷರು, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು. ಅವರು ಸೆ 17ರ ಸೋಮವಾರ ಬಜಾಲ್ ಪಕ್ಕಲಡ್ಕ ದಲ್ಲಿ ರಸ್ತೆ ಕಾಮಗಾರಿ ವಿಳಂಬವನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪಡೀಲು ಬಜಾಲ್ ರಸ್ತೆಯಲ್ಲಿ ಈ ಹಿಂದೆ ಅಭಿವೃದ್ಧಿ ಕಾಮಗಾರಿ ನಡೆದಿದೆ ಅಂದರೆ ಅದು ಸ್ಥಳೀಯವಾಗಿ ಡಿವೈಎಫ್ಐ ನಡೆಸಿದ ಹೋರಾಟದ ಭಾಗವಾಗಿಯೇ ಹೊರತು ಜನಪ್ರತಿನಿಧಿಗಳ ಕಾಳಜಿಯಿಂದಲ್ಲ. ಈ ಭಾಗದ ಜನ ಪ್ರತಿಯೊಂದನ್ನು ಹೋರಾಟದ ಮೂಲಕವೇ ಪಡೆದಿರುತ್ತಾರೆ.ಹೆಚ್ಚಾಗಿ ಬಡವರೇ ಇರುವ ಈ ಪ್ರದೇಶವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮನ್ನಾಳುವ ಸರಕಾರಗಳಿಗೆ ಕನಿಷ್ಟ ಕಾಳಜಿಯೂ ಇಲ್ಲ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.
ಮುಂದೆ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಸುಮಾರು ಐದುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ರಸ್ತೆಯ ಕಾಮಗಾರಿಯನ್ನು ಎರಡು ಪ್ರತ್ಯೇಕ ಗುತ್ತಿಗೆದಾರರಿಗೆ ವಹಿಸಲಾಗಿದ್ದರೂ ಯಾಕಾಗಿ ಈ ರಸ್ತೆ ನಿರ್ಮಿಸಲು ವಿಳಂಬ ಎಂಬುದು ಜನರಿಗೆ ಗೊತ್ತಾಗಬೇಕಾಗಿದೆ. ಪ್ರತಿಭಾರಿಯೂ ಜನ ಮೂಲಭೂತ ಸೌಕರ್ಯಗಳನ್ನು ಬೀದಿಗೆ ಬಂದು ಪ್ರತಿಭಟಸಿ ಪಡೆಯಬೇಕೆಂದಾದರೆ ಜನಪ್ರತಿನಿಧಿಗಳ ಆಯ್ಕೆ ಯಾಕೆ? .ಆದ್ದರಿಂದ ಕೂಡಲೇ ಈ ರಸ್ತೆ ನಿರ್ಮಾಣ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಇಲ್ಲದ್ದಿದ್ದಲ್ಲಿ ಮುಂದಿನ ದಿನ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ವೇಳೆ ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪಾಲಿಕೆ ಇಂಜಿನಿಯರ್ ಗಣಪತಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಅವರು ಇನ್ನು ಒಂದು ತಿಂಗಳೊಳಗೆ ಎಲ್ಲಾ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಡಿವೈಎಫ್ಐ ಘಟಕ ಅದ್ಯಕ್ಷರಾದ ರಿತೇಶ್ ಪಕ್ಕಲಡ್ಕ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ದೀಪಕ್, ನಾಗರಾಜ್,ಧಿರಾಜ್ ,ದೀಕ್ಷಿತ್, ವರಪ್ರಸಾದ್, ಸೋನಿಲ್ ಮುಂತಾದವರು ಉಪಸ್ಥಿತರಿದ್ದರು.