ಮಂಗಳೂರು, ಸೆ 18(SM): ಪಣಂಬೂರು ಠಾಣಾ ವ್ಯಾಪ್ತಿಯ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7,50,000 ಮೌಲ್ಯದ ತಾಳೆ ಎಣ್ಣೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ವಂಚನೆ ನಡೆಸಿ ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸದೇ ಮೋಸ ಮಾಡಿದ ಕುರಿತ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭ ಕೊಲೆ ಪ್ರಕರಣವೊಂದು ಬಯಲಾಗಿದೆ.
ಅಸಾದುಲ್ಲಾ ಷರೀಫ್(49) ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಸಹಚರರೊಂದಿಗೆ ಸೇರಿಕೊಂಡು ಅನಿಲ್ ನನ್ನು ಕೊಲೆ ಮಾಡಿ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಸಾಮಾಗ್ರಿಗಳನ್ನು ದೋಚಿದ್ದಾನೆ ಎಂದು ವಿಚಾರಣೆಯ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅನಿಲ್ ಕುಮಾರ್ ನ ಶವವನ್ನು ಬೆಂಗಳೂರು ದಕ್ಷಿಣ ಉಪ-ವಿಭಾಗಾಧಿಕಾರಿ ಮೂಲಕ ಮಣ್ಣಿನಿಂದ ಹೊರತೆಗೆದು ಶವ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.
ಇನ್ನು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
1050 ಬಾಕ್ಷ್ ತಾಳೆ ಎಣ್ಣೆಯನ್ನು ಚಾಲಕ ಅನೀಲ್ ಕುಮಾರ್ ಇವರೊಂದಿಗೆ ಸುಗಮ ಕಂಪನಿಯ ಲಾರಿಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟದನ್ನು ಮೋಸ ಮಾಡಿರುವ ಬಗ್ಗೆ ಶಿವಗಣೇಶ್ ಟ್ರಾನ್ಸ್ ಪೋರ್ಟ್ ಮಾಲೀಕರು ನೀಡಿದ ದೂರಿನಂತೆ ವಂಚನೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪಣಂಬೂರು ಠಾಣಾ ಪಿ.ಐ ರಫೀಕ್ ಕೆ.ಎಂ. ಮತ್ತು ಪಿ.ಎಸ್.ಐ ಉಮೇಶ್ ಕುಮಾರ್ ಎಂ.ಎನ್ ರವರು ತನಿಖೆಯನ್ನು ಮುಂದುವರಿಸಿದ್ದಾರೆ.