ಉಳ್ಳಾಲ,ಅ05: ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಬುಧವಾರ ತಂಡವೊಂದರಿಂದ ನಡೆದ ದುಷ್ಕೃತ್ಯವನ್ನು ಕಾಂಗ್ರೆಸ್ ಖಂಡಿಸಿದ್ದು, ಈ ಘಟನೆಯ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಪೊಲೀಸರಿಗೂ ಮನವಿ ಮಾಡಿದ್ದೇವೆ. ಆದರೆ ಬಿಜೆಪಿಯವರು ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರೇ ಹತ್ಯೆ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿ ಸಮಾಜದ ಅಶಾಂತಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಸುಳ್ಳು ಆರೋಪ ಹೊರಿಸಿದ ರಹೀಂ ಉಚ್ಚಿಲ್ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಲಾಗಿದ್ದು, ಅವರನ್ನು ಕೂಡಲೇ ಪೊಲೀಸರು ಬಂಧಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು. ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟುವಿನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ದುಷ್ಕೃತ್ಯದಲ್ಲಿ ಹತ್ಯೆಯಾದ ಝುಬೈರ್ ಅವರು ಸಚಿವ ಯು.ಟಿ.ಖಾದರ್ ಅವರ ಅಭಿಮಾನಿಯಾಗಿದ್ದಾರೆ. ಇಲ್ಲಸಲ್ಲದ ಅಪಪ್ರಚಾರ ನಡೆಸಿ ಶಾಂತಿಯುತ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ನಡೆಸಿರುವ ಹುನ್ನಾರವಾಗಿದೆ. ಪೊಲೀಸರು ಇಂತಹ ಸುಳ್ಳು ಸುದ್ದಿಯನ್ನು ಹರಡಿ ಸಮಾಜದ ಅಶಾಂತಿಗೆ ಕಾರಣಕರ್ತರಾದ ರಹೀಂ ಉಚ್ಚಿಲ್ ಅವರನ್ನು ಕೂಡಲೇ ಬಂಧಿಸದಿದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯೆದರು ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಪ್ರದಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಉಪಾಧ್ಯಕ್ಷರಾದ ಮಹಮ್ಮದ್ ಮುಸ್ತಫಾ ಹರೇಕಳ, ಡಿಸಿಸಿ ಸದಸ್ಯರಾದ ಉಮ್ಮರ್ ಪಜೀರ್, ತಾ.ಪಂ.ಸದಸ್ಯ ಜಬ್ಬಾರ್ ಬೋಳಿಯಾರ್, ಮುಖಂಡರಾದ ಸಲೀಂ ಮತ್ತಿತರರು ಉಪಸ್ಥಿತರಿದ್ದರು.