ನವದೆಹಲಿ,ಸೆ 19 (MSP): 2019ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿ ಅಂತ್ಯವಾಗಲಿದ್ದು, ಸುಮಾರು ನಾಲ್ಕೂವರೆ ವರ್ಷಗಳಲ್ಲಿ ಯಶಸ್ವಿ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ ಎಷ್ಟು ಎನ್ನುವ ಗುಟ್ಟನ್ನು ಪ್ರಧಾನಿ ಕಾರ್ಯಾಲಯ ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ಸ್ಥಿರ ಮತ್ತು ಚರಾಸ್ತಿ ಮೌಲ್ಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ ಪ್ರಧಾನಿ ಕಾರ್ಯಾಲಯ ಮೋದಿ ಅವರ ಒಟ್ಟು ಆಸ್ತಿ 2 ಕೋಟಿ ರೂಪಾಯಿ ಎಂದು ಬಹಿರಂಗಪಡಿಸಿದೆ.
2018ರ ಮಾರ್ಚ್ 31ರ ವರೆಗಿನ ಲೆಕ್ಕಾಚಾರದಂತೆ ಮೋದಿ ಬಳಿ ಒಟ್ಟು ಎರಡು ಕೋಟಿ ಮೌಲ್ಯದ ಆಸ್ತಿ ಇದ್ದರೂ ಅವರು ಯಾವುದೇ ಸ್ವಂತ ಕಾರು ಅಥವಾ ಬೈಕ್ ಹೊಂದಿಲ್ಲ. ಪ್ರಧಾನಿ ಮೋದಿ ತಮ್ಮ ಬಳಿ 48,944 ರೂಪಾಯಿ ಕ್ಯಾಶ್ ಇಟ್ಟುಕೊಂಡಿದ್ದು, ಇನ್ನು ಸ್ಟೇಟ್ ಬ್ಯಾಂಕ್ನ ಗಾಂಧಿನಗರ ಶಾಖೆಯಲ್ಲಿ 11,29,690 ರೂಪಾಯಿ ಡೆಪಾಸಿಟ್ ಮಾಡಿದ್ದಾರೆ. ಅವರ ಇನ್ನೊಂದು ಎಸ್ಬಿಐ ಅಕೌಂಟ್ನಲ್ಲಿ 1,07,96,288 ರೂಪಾಯಿಗಳನ್ನು ಠೇವಣಿ ಇಟ್ಟಿದ್ದಾರೆ.
ಇನ್ನು 1,59,281 ಮೌಲ್ಯದ ಜೀವ ವಿಮಾ (ಎಲ್ಐಸಿ) ಪಾಲಿಸಿ ಹೊಂದಿದ್ದು, ಮೋದಿ ಬಳಿ ನಾಲ್ಕು ಚಿನ್ನದ ಉಂಗುರಗಳಿದ್ದು, ಇವುಗಳ ಮೌಲ್ಯ 1,38,060 ರೂಪಾಯಿ. ಇನ್ನು ಗುಜಾರತ್ನ ಗಾಂಧಿನಗರದಲ್ಲಿ ರೆಸಿಡೆನ್ಶಿಯಲ್ ಬಿಲ್ಡಿಂಗ್ನಲ್ಲಿ 4ನೇ 1 ಭಾಗ್ ಷೇರು ಹೊಂದಿದ್ದಾರೆ. 2002ರಲ್ಲಿ ಈ ಆಸ್ತಿಯನ್ನ ಮೋದಿ 1,30,488 ರೂಪಾಯಿಗೆ ಖರೀದಿಸಿದ್ದರು. ಇದರ ಈಗಿನ ಸರಿ ಸುಮಾರು 1 ಕೋಟಿ ರೂಪಾಯಿ ಎಂದು ತಿಳಿಸಿದೆ.