ನವದೆಹಲಿ, ಸೆ19 (MSP): ತ್ರಿವಳಿ ತಲಾಖ್ ನ್ನು ಇನ್ನು ಮುಂದೆ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಸಭೆ ಸೆ.19 ರಂದು ಒಪ್ಪಿಗೆ ನೀಡಿದೆ. ತ್ರಿವಳಿ ತಲಾಖ್ ನಿಷೇಧಿಸುವ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆಗೆ, ಸಂಸತ್ ನಲ್ಲಿ ಎರಡು ಸದನಗಳಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ, ಕೇಂದ್ರಸರ್ಕಾರವು ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದ್ದು, ಹೀಗಾಗಿ ಇನ್ಮುಂದೆ ತ್ರಿವಳಿ ತಲಾಖ್ ನೀಡುವ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಕಳೆದ ವರ್ಷದ ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆಯಲ್ಲಿ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ಇದಕ್ಕೆ ರಾಜ್ಯಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧ ವ್ಯಕ್ತವಾದ್ದರಿಂದ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ ಪಡೆಯಲು ವಿಫಲವಾಗಿತ್ತು. ಅದ್ದರಿಂದ ವಿಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ, ಮುಸ್ಲಿಂ ಮಹಿಳೆಯರ ವಿವಾಹ ಮತ್ತು ರಕ್ಷಣಾ ಮಸೂದೆಯಲ್ಲಿ ಮೂರು ಪ್ರಮುಖ ತಿದ್ದುಪಡಿಗಳನ್ನು ತಂದಿತ್ತು.
ಕೇಂದ್ರ ಸಚಿವ ಸಂಪುಟ ದಲ್ಲಿ ಸುಗ್ರೀವಾಜ್ಞೆಗೆ ಒಪ್ಪಿಗೆ ಸಿಕ್ಕಿದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಖ್ ಎಂಬುದು ಅಮಾನವೀಯ ಮತ್ತು ಅನಾಗರಿಕ ಪದ್ಧತಿ. ಹೀಗಾಗಿ ಈಗಾಗಲೇ ಜಗತ್ತಿನ 22 ದೇಶಗಳಲ್ಲಿ ತ್ರಿವಳಿ ತಲಾಖ್ ನ್ನು ನಿಷೇದಿಸಿದ್ದಾರೆ. ಆದರೆ ನಮ್ಮ ದೇಶದಲ್ಲಿ ಮುಸ್ಲಿಂ ಮಹಿಳಾ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ ಜಾರಿಗೆ ಕಾಂಗ್ರೆಸ್ ಪಕ್ಷ ಸಹಕಾರ ನೀಡಿಲ್ಲ ಎಂದು ಆರೋಪಿಸಿದರು.