ಬೆಂಗಳೂರು, ಸೆ 19(SM): ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ನಾನು ಕಾರಣ ಹಾಗೂ ಬಿಜೆಪಿ ಸರ್ಕಾರ ಅಧಿಕಾರ ವಂಚಿತವಾಗಲು ನಾನು ಒಬ್ಬನೇ ಅಡ್ಡಿಯಾಗಿದ್ದೆ. ಅದಕ್ಕಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ. ನಾನೇನು ಹವಾಲಾ ಹಗರಣದಲ್ಲಿ ಭಾಗಿಯಾಗಿಲ್ಲ. ಬಿಜೆಪಿ ಒತ್ತಡದಿಂದ ಐಟಿ, ಇಡಿ ಅಧಿಕಾರಿಗಳು ನನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಅಣ್ಣ ಡಿಕೆಶಿಯನ್ನು ಜೈಲಿಗೆ ಹಾಕಿಸುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ನಾಯಕರೇ ನನ್ನ ತಮ್ಮ ಡಿಕೆ ಸುರೇಶ್ ಗೆ ಮಾಹಿತಿ ನೀಡಿದ್ದಾರೆ. ನಾನು ಯಾವುದೇ ಕೊಲೆ ಮಾಡಿಲ್ಲ. ಅತ್ಯಾಚಾರ ಕೂಡ ಮಾಡಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. ನಾನು ಹೇಡಿಯಲ್ಲ. ಜೈಲಿಗೆ ಹೋಗಲು ನಾನು ಸಿದ್ಧನಿದ್ದೇನೆ. ಈ ನೆಲದ ಕಾನೂನು, ಪ್ರಜಾಪ್ರಭುತ್ವದ ಮೇಲೆ ನನಗೆ ನಂಬಿಕೆ ಇದ್ದು, ಯಾವುದೇ ವಿಚಾರಣೆಗೆ ನಾನು ಸಿದ್ಧನಿದ್ದೇನೆ ಎಂದರು.
ನಾನು ಇಂದು ಹೊರಬಂದು ಮಾತನಾಡಲು ಬಿಜೆಪಿ ನಾಯಕರ ನಡೆಯೇ ಕಾರಣ. ಐಟಿಯವರು ನನಗೆ, ನಮ್ಮ ಕುಟುಂಬದವರಿಗೆ, ನನ್ನ ಆಪ್ತರಿಗೆ ಸಾಕಷ್ಟು ಹಿಂಸೆ ನೀಡಿದ್ದಾರೆ. ಒತ್ತಾಯ ಪೂರ್ವಕವಾಗಿ ನಮ್ಮಿಂದ ಹೇಳಿಕೆ ಪಡೆದುಕೊಂಡು, ಸಹಿ ಹಾಕಿಸಿಕೊಂಡು ಹವಾಲಾ ದಂಧೆ ಎಂದು ಬಿಂಬಿಸುತ್ತಿದ್ದಾರೆ.
ಜೈಲಿಗೆ ಹೋದವರೆಲ್ಲಾ ರಾಷ್ಟ್ರೀಯ ಪಕ್ಷದ ಅಧ್ಯಕ್ಷರುಗಳಾಗಿದ್ದಾರೆ. ನಾನು ನಾಲ್ಕು ಎಂಎಲ್ ಎಗಳನ್ನು ಬಿಜೆಪಿಗೆ ಕಳುಹಿಸಬೇಕಿತ್ತು. ಆದರೆ ಅದಕ್ಕೆ ನಾನು ಸೊಪ್ಪು ಹಾಕಿಲ್ಲ. ಹೀಗಾಗಿ ಬಿಜೆಪಿ ನನ್ನ ವಿರುದ್ಧ ಷಡ್ಯಂತ್ರ ರಚಿಸಿದೆ. ನಾನೇನು ತಪ್ಪು ಮಾಡಿಲ್ಲ. ನಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕೆಂದು ಪ್ರಶ್ನಿಸಿದ ಅವರು, ಬಿಜೆಪಿಯ ಆಪರೇಶನ್ ಕಮಲದ ಇಂಚಿಂಚು ಮಾಹಿತಿಯನ್ನು ಬಯಲಿಗೆಳೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.