ಕಾಸರಗೋಡು,ಅ05: ನಕಲಿ ದಾಖಲೆ ನೀಡಿ ಬ್ಯಾಂಕ್ ನಿಂದ ಎರಡೂವರೆ ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೊಳತ್ತೂರು ಕೇಳೊಟ್ ನ ಪ್ರದೀಪ್ ( 31 ) ಎಂದು ಗುರುತಿಸಲಾಗಿದೆ.
2014 ರ ಏಪ್ರಿಲ್ ನಲ್ಲಿ ಈತ ನಕಲಿ ಹಕ್ಕು ಪತ್ರ ನೀಡಿ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ ಎನ್ನಲಾಗಿದೆ. ತಾಯಿಯ ಹೆಸರಿನಲ್ಲಿರುವ ಒಂದೂವರೆ ಎಕರೆ ಸ್ಥಳದ ಹಕ್ಕು ಪತ್ರವನ್ನು ಬ್ಯಾಂಕ್ ಗೆ ಸಲ್ಲಿಸಲಾಗಿತ್ತು. ಆದರೆ ಸಾಲ ಮರುಪಾವತಿಸದ ಹಿನ್ನಲೆಯಲ್ಲಿ ಕಾನೂನು ಕ್ರಮದಂತೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದು ಗ್ರಾಮ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ದಾಖಲೆಗಳು ನಕಲಿ ಎಂದು ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾ ಬ್ಯಾಂಕ್ ಮೆನೇಜರ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು, ಈ ಬಗ್ಗೆ ತನಿಖೆ ನಡೆಸುವಂತೆ ತಹಶೀಲ್ದಾರ್ ಗೆ ಆದೇಶಿಸಿದ್ದರು. ಈ ನಡುವೆ ಪ್ರದೀಪ್ ತಲೆಮರೆಸಿಕೊಂಡಿದ್ದು ಬುಧವಾರ ಈತ ಊರಿಗೆ ಬಂದಿರುವುದಾಗಿ ಲಭಿಸಿದ ಮಾಹಿತಿಯಂತೆ ಈತನನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.