ಮಂಗಳೂರು, ಸೆ 20 (MSP) : ಸೆಪ್ಟೆಂಬರ್ 24ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮರಳು ಸಮಸ್ಯೆ ಮತ್ತು ಭೂಪರಿವರ್ತನೆ ಸಂಬಂಧ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಕರಾವಳಿಯಲ್ಲಿ ಉಂಟಾಗಿರುವ ಮರಳು ಕೊರತೆ ಹಾಗೂ ಪರಿಹಾರದ ಕುರಿತು ಚರ್ಚೆ ನಡೆಯಲಿದೆ.
ಇದಕ್ಕೂ ಮೊದಲು ಸಭೆಯ ಪೂರ್ವಭಾವಿಯಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಾದ ರಾಜಶೇಖರ್ ಪಾಟೀಲ್ ಸೆ 24ರಂದು ಮದ್ಯಾಹ್ನ ಎರಡು ಗಂಟೆಗೆ ವಿಶೇಷ ಸಭೆಯನ್ನು ನಡೆಸಲಿದ್ದಾರೆ. ಬಳಿಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅದೇ ದಿನ ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಕರಾವಳಿಯ ಮರಳು ಸಮಸ್ಯೆಗೆ ಪರಿಹಾರ ಕಂಡುಹುಡುಕಲು ಸಭೆಯನ್ನು ನಡೆಸಲು ತಾನು ಮುಖ್ಯಮಂತ್ರಿಗಳನ್ನು ವಿನಂತಿಸಿದ್ದು, ಅದರಂತೆ ಈ ಸಭೆ ಏರ್ಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ತಿಳಿಸಿದ್ದಾರೆ.
ಕೆಡಿಪಿ ಸಭೆ ಮುಂದೂಡಿಕೆ: ಮುಖ್ಯಮಂತ್ರಿಗಳ ಈ ಸಭೆಯ ಹಿನ್ನೆಲೆಯಲ್ಲಿ ಸೆ.24ರಂದು ಮಂಗಳೂರಿನಲ್ಲಿ ನಿಗದಿಯಾಗಿದ್ದ ತ್ರೈಮಾಸಿಕ ಕೆಡಿಪಿ ಸಭೆಯನ್ನು ಸೆ.26ಕ್ಕೆ ಮುಂದೂಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.