ಬಂಟ್ವಾಳ, ಸೆ 20(SM): ಅಪ್ರಾಪ್ತೆಯೋರ್ವಳ ಮೇಲೆ ಮೂವರ ತಂಡವೊಂದು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬಂಟ್ವಾಳದ ಪಾಣೆಮಂಗಳೂರಿನ ಗೂಡಿನ ಬಳಿ ನಡೆದಿದೆ. ಇಲ್ಲಿನ ಸ್ಥಳಿಯ ನಿವಾಸಿಗಳಾದ ರಝಾಕ್(35), ನವಾಜ್(25) ಹಾಗೂ ಶೇಕಬ್ಬ(80) ಬಾಲಕಿಯ ಮೇಲೆ ಕೆಲವು ದಿನಗಳ ಹಿಂದೆ ಅತ್ಯಾಚಾರ ಎಸಗಿದ್ದರು.
ಬಾಲಕಿಯ ವರ್ತನೆಯಲ್ಲಿ ಬದಲಾವಣೆಯುಂಟಾದ ಸಂದರ್ಭ ಪೋಷಕರು ವಿಚಾರಣೆ ನಡೆಸಿದ್ದು, ಆರೋಪಿಗಳು ಎಸಗಿದ ಕೃತ್ಯದ ಬಗ್ಗೆ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೋಷಕರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಕಾರ್ಯ ಪ್ರವೃತರಾದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಬಂಧಿತರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬಾಲಕಿಯು ಗೂಡಿನ ಬಳಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದು ಈ ಸಂದರ್ಭ ಆರೋಪಿಗಳು ತಮ್ಮ ಮನೆಗೆ ಕರೆದೊಯ್ದು ಕೃತ್ಯ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಈ ಸಂಬಂಧ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 10 ದಿನಗಳ ಹಿಂದೆಯೇ ಈ ಘಟನೆ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ.