ಕಾಪು,ಅ05 : ಗ್ರಾಮೀಣ ಭಾಗದ ಜನರಿಗೆ ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಕಂದಾಯ ಇಲಾಖೆ ಮತ್ತು ಅಂಚೆ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಸರ್ವ ರೀತಿಯಲ್ಲೂ ಮಾದರಿಯಾಗಿ ಮೂಡಿ ಬಂದಿರುವ ಬೆಳಪು ಗ್ರಾಮದಲ್ಲಿ ಕಂದಾಯ ಮತ್ತು ಅಂಚೆ ಇಲಾಖೆಯು ಒಂದೇ ಕಟ್ಟಡದಲ್ಲಿ ಪ್ರಾರಂಭಗೊಳ್ಳುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಪಂಚಾಯತ್ ಕಟ್ಟಡದಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಪ್ರಾರಂಭಗೊಂಡ ಪಣಿಯೂರು ಗ್ರಾಮ ಕರಣಿಕರ ಕಚೇರಿ ಮತ್ತು ಪಣಿಯೂರು ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಪು ಗ್ರಾಮ ಮತ್ತು ಅದಕ್ಕೆ ಹೊಂದಾಣಿಕೆಯಾಗಿರುವ ಕಳತ್ತೂರು, ಎಲ್ಲೂರು ಮತ್ತು ಕಾಪು ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಟಾನಗೊಳ್ಳುತ್ತಿದ್ದು, ಇವೆಲ್ಲವೂ ಈ ಭಾಗದ ಜನರಿಗಾಗಿ ಸರಕಾರ ನೀಡುತ್ತಿರುವ ಕೊಡುಗೆಗಳಾಗಿವೆ. ಸರಕಾರ ನಡೆಸುವ ಅಭಿವೃದ್ಧಿ ಕಾಮಗಾರಿಗಳಿಗೆ ಅಪಸ್ವರ ಬರುವುದು ವಾಡಿಕೆಯಾಗಿದ್ದು, ಯಾವುದೇ ಅಪಸ್ವರ ಬಂದಾಗಲೂ ಬೆಳಪುವಿನಲ್ಲಿ ಅದನ್ನು ಮೀರಿಸಿ ಬೆಂಬಲ ಸಿಗುತ್ತಿದೆ. ಇದು ಈ ಗ್ರಾಮದ ಮೇಲಿನ ಅಭಿಮಾನ ವೃದ್ಧಿಗೆ ಕಾರಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾ. ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪು ಗ್ರಾಮದ ಅಭಿವೃದ್ಧಿಗೆ ಶಾಸಕ ಸೊರಕೆಯವರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಯುನಿವರ್ಸಿಟಿ ಸೆಂಟರ್, ಕೈಗಾರಿಕಾ ಪಾರ್ಕ್, ಅಂಬೇಡ್ಕರ್ ಭವನ, ಶಾದಿ ಮಹಲ್ಗೆ ವಿಶೇಷ ರೀತಿಯಲ್ಲಿ ಅನುದಾನ ಜೋಡಿಸುತ್ತಿರುವ ಅವರು ಕಳತ್ತೂರಿನಲ್ಲಿ ಮೊರಾರ್ಜಿ ಶಾಲೆ, ಎಲ್ಲೂರಿನಲ್ಲಿ ಐಟಿಐಗೆ ಅನುದಾನ ಮತ್ತು ವಿವಿಧ ರಸ್ತೆಗಳ ಅಭಿವೃದ್ಗೆ ಕೋಟ್ಯಾಂತರ ರೂ. ಅನುದಾನ ದೊರಕಿಸಿಕೊಡುವ ಮೂಲಕ ಮಾದರಿ ಶಾಸಕರೆನಿಸಿಕೊಂಡಿದ್ದಾರೆ ಎಂದರು.
ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉಡುಪಿ ಅಂಚೆ ಅಽಕ್ಷಕ ರಾಜಶೇಖರ್ ಭಟ್, ಸಹಾಯಕ ಅಂಚೆ ಅಽಕ್ಷಕ ಶ್ರೀನಾಥ ಎಸ್. ಬಿ., ತಾ.ಪಂ. ಸದಸ್ಯ ಯು. ಸಿ. ಶೇಖಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬೆಳಪು ಗ್ರಾ. ಪಂ. ಉಪಾಧ್ಯಕ್ಷೆ ಶೋಭಾ ಭಟ್, ಪಂಚಾಯತ್ ಅಭಿವೃದ್ಧಿ ಅಽಕಾರಿ ಎಚ್. ಆರ್. ರಮೇಶ್, ಗ್ರಾಮ ಕರಣಿಕ ಗಣೇಶ ಮೇಸ್ತ, ಅಂಚೆ ಅಽಕಾರಿ ರಾಜೇಶ್, ನಡಿಮನೆ ದೇವರಾಜ್ ರಾವ್, ವಿಶ್ವನಾಥ ರಾವ್, ಕರುಣಾಕರ ಶೆಟ್ಟಿ ಪಣಿಯೂರುಗುತ್ತು, ಗ್ರಾ. ಪಂ. ಸದಸ್ಯರು ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.