ಮಂಗಳೂರು, ಸೆ 21(SM): ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫಲಕ, ಕಟೌಟ್, ಫ್ಲೆಕ್ಸ್, ಬ್ಯಾನರ್, ಪೋಸ್ಟರ್ಸ್, ಬಂಟಿಂಗ್ಸ್ಗಳನ್ನು ತೆರವುಗೊಳಿಸುವ ಕಾರ್ಯಚರಣೆ ನಿರಂತರವಾಗಿ ನಡೆಯುತ್ತಿದೆ. ಈ ರೀತಿ ಯಾವುದೇ ಅನಧಿಕೃತವಾಗಿ ಫ್ಲೆಕ್ಸ್ ಇತ್ಯಾದಿಗಳನ್ನು ಅಳವಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಪಾಲಿಕೆ ವ್ಯಾಫ್ತಿಯಲ್ಲಿ ಅನಧಿಕೃತವಾಗಿ ಫಲಕ, ಫ್ಲೆಕ್ಸ್ ಅಳವಡಿಸಿದಲ್ಲಿ ಸಂಘಟಕರ ವಿರುದ್ಧ ಕರ್ನಾಟಕ ತೆರೆದ ಜಾಗ ತಡೆ ಕಾಯ್ದೆ ಪ್ರಕಾರ ದಂಡ ವಿಧಿಸಿ, ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಮಂಗಳೂರು ನಗರ ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪಾಲಿಕೆ ವ್ಯಾಫ್ತಿಯಲ್ಲಿ ಅನಧಿಕೃತವಾಗಿ ಫಲಕ, ಫ್ಲೆಕ್ಸ್ ಅಳವಡಿಸುತ್ತಿರುವವರ ವಿರುದ್ಧ ಸಂಬಂಧಪಟ್ಟ ಪೊಲೀಸ್, ಕಂದಾಯ ನಿರೀಕ್ಷಕರು, ಸಹಾಯಕ ಕಂದಾಯ ಅಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದು ನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಅಳವಡಿಸಲಾಗಿರುವ ಕಟೌಟ್, ಬ್ಯಾನರ್ಗಳನ್ನು ಕೂಡಲೇ ತೆರವುಗೊಳಿಸುವಂತೆ ಎಚ್ಚರಿಸಿದ್ದಾರೆ. ಇಲ್ಲದೇ ಹೋದಲ್ಲಿ ಪಾಲಿಕೆ ಕಾರ್ಯಾಚರಣೆ ನಡೆಸಿ, ಬ್ಯಾನರ್ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.