ಮಂಗಳೂರು, ಸೆ 21(SM): ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೋರ್ವ ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿದ್ದುದು ಪತ್ತೆಯಾಗಿದೆ. ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕಾಸರಗೋಡು ಮೂಲದ ನಿಝರ್ ಖಾದರ್ ಮುಳ್ಳೇರಿಯಾ(32) ಬಂಧಿತ ಆರೋಪಿ. ಈತ ದುಬೈಯಿಂದ ಅಕ್ರಮವಾಗಿ ಚಿನ್ನಾಭರಣ ಸಾಗಾಟ ನಡೆಸುತ್ತಿದ್ದ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ. ತಕ್ಷಣ ಆರೋಪಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಮಾರು 1515.270 ಗ್ರಾಂ ಚಿನ್ನವನ್ನು ಆರೋಪಿ ಸಾಗಾಟ ನಡೆಸುತ್ತಿದ್ದ ಎನ್ನಲಾಗಿದೆ. ಆರೋಪಿ ಸಾಗಾಟ ನಡೆಸುತ್ತಿದ್ದ ಚಿನ್ನದ ಒಟ್ಟು ಮೌಲ್ಯ 47 ಲಕ್ಷ ರೂಪಾಯಿ ಎನ್ನಲಾಗಿದೆ. ಆರೋಪಿಯ ವಿರುದ್ಧ ಅಕ್ರಮವಾಗಿ ಚಿನ್ನಾಭರಣ ಸಾಗಾಟಕ್ಕೆ ಯತ್ನ ಪ್ರಕರಣ ದಾಖಲಾಗಿದೆ.