ಮಂಗಳೂರು, 22(SS): ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಕಡೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಕಿತ್ತುಹೋಗಿದ್ದು, ಮಂಗಳೂರು- ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕಳೆದ ಕೆಲ ದಿನಗಳ ಹಿಂದಿನಿಂದ ಶಿರಾಡಿ ಘಾಟ್ ಹಾಗು ಸಂಪಾಜೆ ಘಾಟ್ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶವಿರಲಿಲ್ಲ. ಪರಿಣಾಮ. ಚಾರ್ಮಾಡಿ ಘಾಟ್ ರಸ್ತೆಯಲ್ಲೇ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚಾರ ಅಪಾಯಕಾರಿಯಾಗಿದೆ. ಮಂಗಳೂರು-ಬೆಂಗಳೂರು ಸೇರಿದಂತೆ ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಶಿರಾಡಿ ಘಾಟ್, ಮಾಣಿ ಮೈಸೂರು ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟ್ ರಸ್ತೆಯೇ ಪರ್ಯಾಯವಾಗಿ ಉಳಿದಿತ್ತು. ಪರಿಣಾಮ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರೀ ವಾಹನಗಳು ಸಂಚರಿಸಿದೆ. ಇದರಿಂದ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಹಾಳಾಗಿದೆ.
ಚಾರ್ಮಾಡಿ ಘಾಟ್ ರಸ್ತೆ ತಿರುವಿನಲ್ಲಿ ತಡೆಗೋಡೆ ಕುಸಿದಿದ್ದು, ರಾತ್ರಿ ಹೊತ್ತು ಈ ತಿರುವುಗಳಲ್ಲಿ ವಾಹನ ಚಾಲನೆ ಅತ್ಯಂತ ಅಪಾಯಕಾರಿಯಾಗಿದೆ. ಭಾರೀ ಮಳೆಯ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ದಟ್ಟಣೆ ಜಾಸ್ತಿಯಾಗಿದೆ.
ಘಾಟ್ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಅಪಾಯ ಸಂಭವಿಸುವ ಮುನ್ನ ಕನಿಷ್ಠ ರಸ್ತೆಗೆ ತೇಪೆ ಹಾಕುವ ಕಾರ್ಯವನ್ನಾದರೂ ಮಾಡಬೇಕಿದೆ.