ಉಡುಪಿ, ಸೆ22(SS): ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ರಾಜ್ಯದ ಆಡಳಿತದಲ್ಲಿ ಹಿಡಿತ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯವೇ ಕಂಡು ಕೇಳರಿಯದ ದಬ್ಬಾಳಿಕೆ ಗುರುವಾರ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಗೂಂಡಾಗಿರಿ ಎಂದು ಕಿಡಿಕಾರಿದರು.
ಸಿಎಂ ಭಯೋತ್ಪಾದಕನ ರೀತಿಯಲ್ಲಿ ಹೇಳಿಕೆ ಕೊಡುತ್ತಾರೆ. ಅವರ ಮಾದರಿಯಲ್ಲೇ ದಂಗೆ ಏಳುವುದಾಗಿ ಕರೆ ಕೊಟ್ಟಿದ್ದಾರೆ. ಆಳುವ ಪಕ್ಷದ ಆಣತಿಯಂತೆ ಎಲ್ಲವೂ ನಡೆದಿದೆ. ಹಾಗಾಗಿ ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ಆಡಳಿತದಲ್ಲಿ ಹಿಡಿತ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪ ಮೇಲಿನ ಎಲ್ಲಾ ಕೇಸ್ ಖುಲಾಸೆಯಾಗಿದೆ. ಸಿಎಂ ಹಳೇ ಕೇಸ್ ರೀ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಗೂಂಡಾಗಿರಿ ರಾಜಕಾರಣ ನಡೆಯುವುದಿಲ್ಲ. ಡಿಕೆಶಿಯವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಪ್ರಕರಣದ ಕುರಿತು ತನಿಖೆ ನಡೆಯುವಾಗ ಡಿಕೆಶಿ ಅಧಿಕಾರದಲ್ಲಿ ಇರುವುದು ಸರಿಯಲ್ಲ. ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.