ಕೊಚ್ಚಿ, ಸೆ22(SS): ಜಲಂಧರ್ ಮೂಲದ ಬಿಷಪ್ ಫ್ರಾಂಕೊ ಮುಲ್ಲಾಕಲ್ ಅವರು 2014ರಿಂದ 2016ರ ಅವಧಿಯಲ್ಲಿ 13 ಬಾರಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ 44 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರು ಕೇರಳ ಪೊಲೀಸರಿಗೆ ಜೂನ್ನಲ್ಲಿ ದೂರು ನೀಡಿದ್ದರು. ದೇಶ ಹಾಗೂ ವಿದೇಶಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕೇರಳದ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ ಸಂಬಂಧ ಇದೀಗ ಬಿಷಪ್ ಫ್ರಾಂಕೊ ಮುಳಕ್ಕಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಷಪ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಮೂರು ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಫ್ರಾಂಕೊ ಮುಳಕ್ಕಲ್ ಅವರು ಕ್ರೈಸ್ತ ಸನ್ಯಾಸಿನಿಯ ಮೇಲೆ 2014 ರಿಂದ 2016ರವರೆಗೆ ನಿರಂತರವಾಗಿ ಅತ್ಯಾಚಾರ ಎಸಗಿದ್ದರು ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ದೂರು ನೀಡಿದ್ದರು. ಕ್ಯಾಥೋಲಿಕ್ ಚರ್ಚ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸನ್ಯಾಸಿನಿಯರ ಗುಂಪು ಲೈಂಗಿಕ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಅತ್ಯಾಚಾರ ಆರೋಪಿ ಜಲಂಧರ್ ಬಿಷಪ್ ಫ್ರಾಂಕೊ ಮುಲ್ಲಾಕಲ್ ಅವರನ್ನು ರಕ್ಷಿಸುತ್ತಿರುವ ಚರ್ಚ್ ಪ್ರಾಧಿಕಾರ ಮತ್ತು ಪೊಲೀಸರ ವಿರುದ್ಧ ವಂಚಿ ಚೌಕದಲ್ಲಿ ಕುಳಿತು ಪ್ರತಿಭಟಿಸಿದ್ದರು. ಜೊತೆಗೆ ಆರೋಪಿಯ ಶೀಘ್ರ ಬಂಧನಕ್ಕೂ ಒತ್ತಾಯಿಸಿದ್ದರು. ಆದರೆ ದೂರು ದಾಖಲಾದ 87 ದಿನದ ನಂತರ ಬಿಷಪ್ ಬಂಧನವಾಗಿದೆ.