ಮಂಗಳೂರು, ಸೆ22(SS): ಸರ್ಕಾರದ ನಿಯಮದಂತೆಯೇ ಕಂಬಳ ನಡೆಸಲು ಸಮಿತಿ ತೀರ್ಮಾನಿಸಿದ್ದು, ಹಿಂಸೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ರಾಜೀವ್ ಶೆಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕಂಬಳ ಕ್ರೀಡೆಯು ಕರಾವಳಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಈಗಾಗಲೇ ಸರ್ಕಾರದ ನಿರ್ದೇಶನದ ಪ್ರಕಾರ ನಿಯಮಾವಳಿಗಳನ್ನು ರೂಪಿಸಲಾಗಿದೆ. ಈ ಕುರಿತು ಇನ್ನಷ್ಟು ಸುಧಾರಣೆಗಳನ್ನು ಒಳಗೊಂಡ ನಿಯಮಗಳನ್ನು ಸೆ 23 ರಂದು ನಡೆಯಲಿರುವ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಪೆಟಾ ಸುಮ್ಮನೇ ಆರೋಪ ಮಾಡುತ್ತಿದೆ. ಕಾಡು ಪ್ರಾಣಿಗಳಿಗೂ ಸಾಕುಪ್ರಾಣಿಗಳಿಗೂ ವ್ಯತ್ಯಾಸಗಳಿವೆ. ನಾವು ದನದಂತೆಯೇ ಕೋಣಗಳನ್ನೂ ಸಾಕುತ್ತೇವೆ. ದನಗಳಂತೆಯೇ ಅದಕ್ಕೂ ಮೂಗುದಾರ ಕಟ್ಟುತ್ತೇವೆ. ಕುದುರೆ ರೇಸ್ನಲ್ಲೂ ಎಂಟು ಏಟು ಹೊಡೆಯಬಹುದು ಎಂಬ ಕಾನೂನಿದೆ. ಆದರೆ ಕಂಬಳ ಸಂದರ್ಭದಲ್ಲಿ ಕೋಲು ಎತ್ತಿ ಹಿಡಿದ ಮಾತ್ರಕ್ಕೇ ಹಿಂಸೆ ಮಾಡಲೆಂದೇ ಕೋಲು ಹಿಡಿಯುವುದಾಗಿ ವಾದಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸರಕಾರದ ರೂಪುರೇಷೆಯಲ್ಲಿ ಕಂಬಳ ಗದ್ದೆಯ ಉದ್ದ 120 ಮೀ. ಎಂದು ತಿಳಿಸಲಾಗಿದೆ. ಆದರೆ ಕನಿಷ್ಠ ಪಕ್ಷ 135 ಮೀ. ಉದ್ದ ಇರಬೇಕು. ಇಲ್ಲದಿದ್ದರೆ ಕೋಣಗಳನ್ನು ನಿಯಂತ್ರಣ ಮಾಡಲು ಕಷ್ಟವಾಗುತ್ತದೆ. ಇದನ್ನು ಸ್ವಲ್ಪ ಬದಲಾವಣೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಉಳಿದಂತೆ ಯಾವುದೇ ಆಕ್ಷೇಪಗಳಿಲ್ಲ ಎಂದು ತಿಳಿಸಿದ್ದಾರೆ.
ಪೇಟಾ ಸಂಘಟನೆಯ ಹಳೆಯ ಕ್ಲಿಪ್ಪಿಂಗ್ಗಳನ್ನೇ ಇಟ್ಟುಕೊಂಡು ಮತ್ತೆ ಕಂಬಳದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೋಣಗಳ ಬಾಯಲ್ಲಿ ನೊರೆಯಂಥ ವಸ್ತು ಬರುತ್ತದೆ, ಹಗ್ಗವನ್ನು ಬಿಗಿಯಾಗಿ ಕಟ್ಟಿ ಉಸಿರಾಡಲು ತೊಂದರೆಯಾಗುತ್ತದೆ, ಅವುಗಳನ್ನು ಸಾಗಿಸುವಾಗ ಮೆತ್ತನೆಯ ದಿಂಬು ಇಡುವುದಿಲ್ಲ, ಮೂಗುದಾರ ಕಟ್ಟುತ್ತಾರೆ ಇತ್ಯಾದಿ ಆರೋಪಗಳನ್ನೂ ಮಾಡಿದೆ. ಆದರೆ ಈ ರೀತಿ ಹಿಂಸೆ ನಡೆಯುವುದಿಲ್ಲ ಎಂದು ಅವರು ತಿಳಿಸಿದರು.