ಸುಪ್ರೀತಾ ಸಾಲ್ಯಾನ್
ಸೌರಾಜ್..ಈ ಹೆಸರು ಸೋಶಿಯಲ್ ಮೀಡಿಯಾದಲ್ಲಿರುವ ಪ್ರತಿಯೊಬ್ಬರಿಗೂ ಚಿರಪರಿಚಿತ. ಅಷ್ಟೇ ಅಲ್ಲ ಮಂಗಳೂರಿನಲ್ಲಿ ಇವರು ತುಂಬಾನೇ ಫೇಮಸ್. ಕೊಳಕು ರಾಜಕೀಯ, ನಗರದ ಅವ್ಯವಸ್ಥೆ, ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಅಷ್ಟೇ ಯಾಕೆ ಜನಸಾಮಾನ್ಯರ ಸಂಕಷ್ಟಕ್ಕೆ ಧ್ವನಿಯಾಗಿ, ಅನ್ಯಾಯದ ವಿರುದ್ಧ ಮುಖಕ್ಕೆ ಹೊಡೆದಂತೆ ಮಾತನಾಡುವ ಇವರು ಒಂದು ರೀತಿಯಲ್ಲಿ ಎಲ್ಲರ ಫೇವರೆಟ್.
ಹುಟ್ಟಿದ್ದು ಮಂಗಳೂರಿನ ಬೋಳಾರ ಸಮೀಪದ ಹೊಯ್ಗೆಬಜಾರ್ ಎಂಬಲ್ಲಿ. ಮೋಹನ್ ಮತ್ತು ಕುಶಾಲ ದಂಪತಿಯ ಪುತ್ರನಾದ ಸೌರಾಜ್ ತಂದೆಯ ಆಸರೆಯಿಲ್ಲದೆ ಬೆಳೆದವರು. ಒಂದೆಡೆ ಬಡತನ, ಇನ್ನೊಂದೆಡೆ ತಂದೆಯಿಲ್ಲದೇ ಸಂಕಷ್ಟ ಈ ಎಲ್ಲಾ ಪರಿಸ್ಥಿತಿ ಅವರನ್ನು ಸಂಪಾದನೆ ಮಾಡಬೇಕು ಅನ್ನುವ ಛಲಕ್ಕೆ ದೂಡಿತು. ತಾಯಿಗೆ ಆಸರೆಯಾಗಿ ನಿಲ್ಲಬೇಕೆಂಬ ಹಠದೊಂದಿಗೆ ಸಣ್ಣ ವಯಸ್ಸಿನಲ್ಲೇ ಮನೆ ಮನೆಗೆ ತೆರಳಿ ಪೇಪರ್ ಹಾಕುವ ವೃತ್ತಿ ಆರಂಭಿಸಿದರು. ಅದರಲ್ಲಿ ಬಂದ ಅಲ್ಪ ಆದಾಯದಲ್ಲಿ ಇದ್ದ ಪುಟ್ಟ ಮನೆಯಲ್ಲಿ ಬದುಕಿನ ಬಂಡಿ ಸಾಗುತ್ತಿತ್ತು. ಈ ನಡುವೆ ತಮಗೊಂದು ಮನೆ ನಿರ್ಮಿಸಿಕೊಡುವಂತೆ ಸೌರಾಜ್ ಹಾಗೂ ಅವರ ತಾಯಿ ಕುಶಾಲ ಸರ್ಕಾರಕ್ಕೆ ಮನವಿ ಮಾಡಿದ್ದರು. ಜನಪ್ರತಿನಿಧಿಗಳ ಬಳಿ ಅಳಲು ತೋಡಿಕೊಂಡಿದ್ದರು. ಆದರೆ ಸೌರಾಜ್ ಕುಟುಂಬಕ್ಕೆ ಸರ್ಕಾರದಿಂದಗಾಲಿ ಅಥವಾ ಜನಪ್ರತಿನಿಧಿಗಳಿಂದಾಗಲಿ ಯಾವುದೇ ನೆರವು ಸಿಕ್ಕಿರಲಿಲ್ಲ. ಮನೆಯಲ್ಲಿದ್ದ ಬಡತನದಿಂದ ಖಿನ್ನತೆಗೆ ಒಳಗಾಗಿದ್ದ ಸೌರಾಜ್ ಒಂದೊಮ್ಮೆ ಜೀವನವೇ ಬೇಡ ಎಂಬ ನಿರ್ಧಾರಕ್ಕೂ ಬಂದಿದ್ದರು. ಆದ್ರೆ ಮನಸ್ಸು ಗಟ್ಟಿಮಾಡಿಕೊಂಡು ದೃಢಸಂಕಲ್ಪ ಮಾಡಿದರು. ಈ ಎಲ್ಲಾ ಪರಿಸ್ಥಿತಿಯೇ ತಾನೊಬ್ಬ ಸಮಾಜಸೇವಕನಾಗಬೇಕು, ಬಡವರ ಕಷ್ಟಕ್ಕೆ ಸ್ಪಂದಿಸಬೇಕು ಎನ್ನುವ ಹಂಬಲ ಹುಟ್ಟಿಸಲು ಕಾರಣವಾಗಿದ್ದು ಅಂತಾರೆ ಸೌರಾಜ್.
ಇದೀಗ ಟೆಂಪೋ ಡ್ರೈವರ್ ಆಗಿ ವೃತ್ತಿ ನಡೆಸುತ್ತಿರುವ ಸೌರಾಜ್ ಕೇವಲ ತನ್ನ ಮನೆ, ತನ್ನ ಕೆಲಸ, ತನ್ನ ಜೀವನದ ಬಗ್ಗೆ ಮಾತ್ರ ಯೋಚಿಸದೇ ನಿಸ್ವಾರ್ಥ ಮನಸ್ಸಿನಿಂದ ಇತರರಿಗೆ ಸಹಾಯ ಮಾಡುತ್ತಿದ್ದಾರೆ, ಸೇವೆ ಮಾಡುತ್ತಿದ್ದಾರೆ. ಬಹಳಷ್ಟು ಸಮಾಜ ಸೇವೆ, ಶಿಕ್ಷಣ ಸಂಸ್ಥೆಗಳು, ಮತ್ತು ಹಲವಾರು ಸಾಮಾಜಿಕ ಸೇವಾ ಸಂಸ್ಥೆಗಳಿಗೆ ತನ್ನ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಬಡ ರೋಗಿಗಳಿಗೆ ಚಿಕಿತ್ಸೆ, ಅಗತ್ಯವುಳ್ಳವರಿಗೆ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಲು ದಾನಿಗಳ ನೆರವಿನ ಮೂಲಕ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ. ಬೀದಿಯಲ್ಲಿ ಹುಳುಗಳಂತೆ ಬಿದ್ದಿರುತ್ತಿದ್ದ ಮಕ್ಕಳು, ಬಾಲ ಕಾರ್ಮಿಕರು, ಭಿಕ್ಷುಕರನ್ನು ಕರೆತಂದು ಒಂದು ‘ಪರಿವಾರ’ ಕಟ್ಟಿಕೊಂಡು ಅವರನ್ನು ಆಶ್ರಮಗಳಿಗೆ ಸೇರಿಸಿ ಅವರಿಗೆ ಶಿಕ್ಷಣ, ವಸತಿ, ಊಟ ಕೊಟ್ಟು ಸೌರಾಜ್ ಅಭ್ಯುದಯದ ಕನಸು ಕಾಣುತ್ತಿದ್ದಾರೆ.
ಸಾಮಾಜಿಕ ಕಾರ್ಯಗಳ ಮೂಲಕ ಸಂತಸವನ್ನು ಕಾಣುವ, ಸಮಾಜಕ್ಕೆ ಒಳಿತು ಮಾಡಿ, ಆ ಮೂಲಕ ದೇಶವನ್ನು ಬದಲಾವಣೆಯೆಡೆಗೆ ನಡೆಯುವಂತೆ ಮಾಡುವ ಹಂಬಲ ಹೊಂದಿರುವ ಸೌರಾಜ್ ಅನೇಕ ಅನಾಥರ ಬಾಳಿಗೆ ನೆರವಾಗಿದ್ದಾರೆ. ಅನೇಕ ಭಿಕ್ಷುಕರಿಗೆ ಸುಂದರ ಬದುಕು ರೂಪಿಸಿ ಕೊಟ್ಟು ಆತ್ಮತೃಪ್ತಿ ಪಟ್ಟುಕೊಂಡಿದ್ದಾರೆ. ಬೀದಿಯಲ್ಲಿ ಹುಳುಗಳಂತೆ ಬಿದ್ದಿರುತ್ತಿದ್ದ ಮಕ್ಕಳು, ಬಾಲ ಕಾರ್ಮಿಕರನ್ನು ಕರೆತಂದು ಆಶ್ರಮಕ್ಕೆ ಸೇರಿಸುವ ಮಾನವೀಯತೆಯ ಕೆಲಸ ಮಾಡಿದ್ದಾರೆ. ಮಾತ್ರವಲ್ಲ, ಎಚ್.ಐ.ವಿ ಪೀಡಿತ ಮಕ್ಕಳಿಗೆ, ಬಡ ಮಕ್ಕಳಿಗೆ ತಾನು ದುಡಿದ ಸ್ವಂತ ಹಣದಲ್ಲಿ ಬಟ್ಟೆ ಕೊಟ್ಟು ಪರರ ನೋವಿನ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.
31ರ ಹರೆಯದ ಸೌರಾಜ್ ಕಳೆದೊಂದು ದಶಕದಿಂದಲೂ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂಧರು ಮತ್ತು ಅಂಗವಿಕಲರಿಗೆ ಉಚಿತವಾಗಿ ತಮ್ಮ ಟೆಂಪೋದಲ್ಲಿಯೇ ಸೇವೆಯನ್ನು ಒದಗಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಪ್ರತಿ ನಿತ್ಯದ ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿರುವುದು ಸೌರಾಜ್ ಅವರ ಹೃದಯ ವೈಶಾಲ್ಯತೆಯನ್ನು ಎತ್ತಿತೋರಿಸುತ್ತಿದೆ.
ನಿತ್ಯವು ಉಳಿತಾಯ ಮಾಡಿದ ಹಣವನ್ನು ಒಂದು ತಿಂಗಳವರೆಗೆ ಸಂಗ್ರಹಿಸಿ ಅದನ್ನು ವೃದ್ಧಾಶ್ರಮ ಹಾಗೂ ಅನಾಥ ಮಕ್ಕಳ ಆಶ್ರಮಕ್ಕೆ ನೀಡುತ್ತಿದ್ದಾರೆ. ಮಾತ್ರವಲ್ಲ, ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ‘ನನ್ನ ಕೈಲಾದ ಮಟ್ಟಿಗೆ ಸೇವೆ ಮಾಡುತ್ತಿದ್ದೇನೆ . ನಾನು ಬೇರೆಯವರಿಂದ ಹಣ ಅಥವಾ ವಸ್ತುಗಳನ್ನು ಪಡೆದು ಸಮಾಜ ಸೇವೆ ಮಾಡುವುದಿಲ್ಲ. ನನ್ನ ದುಡಿಮೆಯಲ್ಲಿನ ಒಂದಷ್ಟು ಪಾಲು ಸಮಾಜಕ್ಕೆ ವಿನಿಯೋಗವಾಗಲಿ ಎಂಬ ಆಶಯದೊಂದಿಗೆ ಈ ಕೆಲಸ ಮಾಡುತ್ತಿದ್ದಾನೆ’ ಎನ್ನುತ್ತಾರೆ ಸೌರಾಜ್.
ಇನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಇವರು ತುಂಬಾನೇ ಫೇಮಸ್. ನಗರದ ಅವ್ಯವಸ್ಥೆ, ಸಮಾಜದ ಹುಳುಕಿಗೆ ಕನ್ನಡಿ ಹಿಡಿದು ಆಧಿಕಾರಿಗಳು, ಜನಪ್ರತಿನಿಧಿಗಳ ಕಿವಿಗೆ ನಾಟುವಂತೆ ಮಾತನಾಡುವ ಪರಿ ಎಲ್ಲರಿಗೂ ಇಷ್ಟ. ಪೇಸ್ಬುಕ್ ನಲ್ಲಿ ಇವರ ಫ್ರೆಂಡ್ ಲಿಸ್ಟೇ ಇದಕ್ಕೆ ಸಾಕ್ಷಿ.
ತಾನು ತನ್ನದು ಎಂದು ಬದುಕುವ ಸ್ವಾರ್ಥಿಗಳ ನಡುವೆ ತಾನು ದುಡಿದರಲ್ಲಿ ಇತರರಿಗೊಂದು ಪಾಲು ಎಂಬಂತೆ ನಿಸ್ವಾರ್ಥ, ಸ್ವಚ್ಛ ಮನಸ್ಸಿನಿಂದ ಸೇವೆ ಮಾಡುತ್ತಿರುವ ಇಂತಹ ಯುವಕರು ಸಮಾಜಕ್ಕೆ ಮಾದರಿ. ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಅದೆಷ್ಟೋ ಯುವಜನತೆಗೆ ಸ್ಪೂರ್ತಿ. ಹ್ಯಾಟ್ಸ್ ಆಫ್ ಸೌರಾಜ್.