ಬೆಂಗಳೂರು, ಸೆ22(SS): ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ರೌಡಿಶೀಟರೊಬ್ಬರನ್ನು ಆಯ್ಕೆ ಮಾಡಲಾಗಿರುವ ಘಟನೆಯೊಂದು ನಡೆದಿದೆ.
ಯಶಸ್ವಿನಿ ಗೌಡ ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಮಹಿಳಾ ರೌಡಿ ಶೀಟರ್.
ಈಗಾಗಲೇ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಮಹಿಳಾ ರೌಡಿಶೀಟರೊಬ್ಬರನ್ನು ಶ್ರೀರಾಮಸೇನೆ, ಬೆಂಗಳೂರು ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಮಾಡಿಕೊಂಡಿದೆ. ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿಯೇ ಹಾರ ಹಾಕಿಸಿಕೊಳ್ಳುವ ಮೂಲಕ ಯಶಸ್ವಿನಿ ಗೌಡಾಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುತಾಲಿಕ್ ಹಾಗೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಯಶಸ್ವಿನಿ ಗೌಡ ಅವರಿಗೆ ಅಧಿಕಾರ ನೀಡಲಾಗಿದೆ.
ಯಶಸ್ವಿನಿ ಗೌಡ ಸ್ವತಃ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಮಾತ್ರವಲ್ಲ, ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ರೌಡಿಶೀಟರ್ ದಾಖಲಾಗಿದೆ. ಸದ್ಯ ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.