ವೇಣೂರು, ಸೆ 23, (MSP): ಅಕ್ರಮವಾಗಿ ಮರದ ದಿಮ್ಮಿಗಳನ್ನು ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ವೇಣೂರು ಅರಣ್ಯಾಧಿಕಾರಿಗಳು ದಾಳಿ ನಡೆಸಿ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾರಿ ಚಾಲಕ ನಾರಾವಿ ನೂರಳ್ಬೆಟ್ಟುವಿನ ಪ್ರವೀಣ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ನಾರಾವಿ ಗ್ರಾಮ ಪಂಚಾಯತು ಬಳಿಯ ಕುತ್ಪಾದೆ ಹೊಳೆಹೊದ್ದು ರಸ್ತೆಯಲ್ಲಿ ಅಕ್ರಮವಾಗಿ ಲಾರಿಯಲ್ಲಿ ಸುಮಾರು 1, 32,880 ಮೌಲ್ಯದ ಸಾಗುವಾನಿ ಮರದ ದಿಮ್ಮಿಗಳನ್ನು ಲಾರಿ (ಕೆ.ಎ. 19. ಸಿ. 5000)ಯಲ್ಲಿ ಸಾಗಾಟ ಮಾಡುತ್ತಿದ್ದ ಮೇಲಧಿಕಾರಿಗಳಿಂದ ವೇಣೂರು ಅರಣ್ಯ ಇಲಾಖೆಗೆ ಬಂದಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಮಾಹಿತಿ ನೀಡದ ಅರಣ್ಯ ಇಲಾಖಾದಿಕಾರಿಗಳು: ನಾರಾವಿ ಸುತ್ತಮುತ್ತಲ ಪ್ರದೇಶದ ಮರಗಳು ಹಲವಾರು ತಿಂಗಳಿನಿಂದ ಒಮ್ಮಿಂದೊಮ್ಮೆಲೆ ಕಾಣೆಯಾಗುತ್ತಿರುವುದರ ಬಗ್ಗೆ ಸ್ಥಳೀಯ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ನಾರಾವಿ ಗ್ರಾ.ಪಂ. ಅಧ್ಯಕ್ಷರೇ ಇದರಲ್ಲಿ ನೇರವಾಗಿ ಭಾಗಿಯಾಗಿರುವುದು ಓಪನ್ ಸೀಕ್ರೆಟ್ ಆಗಿದೆ. ಅವರು ಯಾವುದೇ ಪರವಾನಗಿ ಇಲ್ಲದೆ ಮರಗಳನ್ನು ಕಡಿದು ಸಾಗಿಸುತ್ತಿರುವುದು ಅರಣ್ಯಇಲಾಖೆಯ ಗಮನಕ್ಕೆ ಬರುತ್ತಿದೆಯಾದರೂ ಸುಮ್ಮನಿರೋದು ಯಾಕೆ? , ಆರೋಪಿಗಳ ಪರ ಮಾಜಿ ಅರಣ್ಯ ಸಚಿವರ ಕೃಪಾಕಟಾಕ್ಷ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.