ಮಂಗಳೂರು, ಮೇ 01 (DaijiworldNews/MB) : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಪೋಲಿಸ್ ಲೇನ್ ಪಾಂಡೇಶ್ವರದಲ್ಲಿ 2000 ಪೊಲೀಸ್ ಸಿಬ್ಬಂದಿಗಳಿಗಾಗಿ ಮರುಬಳಕೆ ಮಾಡಬಹುದಾದ ಮಾಸ್ಕ್ ಹೊಲಿಯುತ್ತಿದ್ದಾರೆ.










ಜ್ಞಾನೋದಯ ಮಹಿಳಾ ಮಂಡಲದ 8 ಮಹಿಳೆಯರು, ಪೊಲೀಸ್ ಲೇನ್ ಪಾಂಡೇಶ್ವರದಲ್ಲಿರುವ ಪೊಲೀಸ್ ಕಲ್ಯಾಣ ಕೇಂದ್ರದಲ್ಲಿ ತೊಳೆದು ಮರುಬಳಕೆ ಮಾಡಬಹುದಾದ ಮಾಸ್ಕ್ಗಳನ್ನು ಹೊಲಿಯುತ್ತಿದ್ದಾರೆ. ಇದರ ನೇತೃತ್ವವನ್ನು ಭಾಗೀರಥಿ, ಸುಶೀಲಾ, ಪೂರ್ಣಿಮಾ ರವಿ ಕುಮಾರ್, ಸುನಿತಾ, ಪೂರ್ಣಿಮಾ, ನೇತ್ರಾವತಿ, ತನುಜಾ ಮತ್ತು ಆಶಾ ವಹಿಸಿದ್ದಾರೆ.
10,000 ಮಾಸ್ಕ್ಗಳನ್ನು ಹೊಲಿಯುವ ಗುರಿಯೊಂದಿಗೆ ಅವರು ಏಪ್ರಿಲ್ 24 ರಿಂದ ಮಾಸ್ಕ್ ಹೊಲಿಯಲು ಪ್ರಾರಂಭಿಸಿದರು. ಈ ಮಹಿಳಾ ಗುಂಪು ದಿನಕ್ಕೆ 75-80 ಮುಖವಾಡಗಳನ್ನು ಹೊಲಿದಿದ್ದು ಈವರೆಗೆ 3000 ಮಾಸ್ಕ್ಗಳನ್ನು ಹೊಲಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ''ಪೊಲೀಸ್ ಸಿಬ್ಬಂದಿಯ ಕುಟುಂಬಗಳು ಕಸೂತಿ, ಕಲೆ, ಟೈಲರಿಂಗ್ ಮೂಲಕ ಹಣ ಸಂಪಾದಿಸುತ್ತಿದ್ದವು. ಲಾಕ್ಡೌನ್ನಿಂದಾಗಿ ಅವರಿಗೆ ಹಣ ಸಂಪಾದಿಸಲು ಸಾಧ್ಯವಾಗಲಿಲ್ಲ. ನಾವು ಮಂಗಳೂರು ಕಮಿಷನರೇಟ್ ಮಿತಿಯಲ್ಲಿನ 2000 ಪೊಲೀಸ್ ಸಿಬ್ಬಂದಿಗಳಿಗೆ ಮಾಸ್ಕ್ ನೀಡಲು ನಿರ್ಧರಿಸಿದ್ದೇವೆ. ಪ್ರತಿ ಓರ್ವ ಪೊಲೀಸ್ ಸಿಬ್ಬಂದಿಗೆ 5 ಮಾಸ್ಕ್ ನೀಡಲು ನಾವು ತೀರ್ಮಾನಿಸಿದ್ದೇವೆ. ಒಟ್ಟಾಗಿ 10,000 ಮಾಸ್ಕ್ಗಳು ಬೇಕಾಗುತ್ತದೆ. ಪೊಲೀಸರಿಗೆ ಮರುಬಳಕೆ ಮಾಡಬಹುದಾದ ಮಾಸ್ಕ್ಗಳನ್ನು ಹೊಲಿಯಲು ಪೊಲೀಸ್ ಸಿಬ್ಬಂದಿಗಳ ಕುಟುಂಬಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದಿವೆ'' ಎಂದು ಹೇಳಿದರು.
''ಸಮವಸ್ತ್ರ ಧರಿಸಿ ಬೇರೆ ಬೇರೆ ಬಣ್ಣದ ಮಾಸ್ಕ್ಗಳನ್ನು ಧರಿಸಿರುವ ಪೊಲೀಸರನ್ನು ನೋಡಿದಾಗ ಅದು ಏನೋ ತಪ್ಪಾಗಿ ಕಾಣುತ್ತದೆ. ಆದ್ದರಿಂದ ನಾವು ಮಾಸ್ಕ್ಗೆ ಬೇಕಾದ ಖಾಕಿ ಬಟ್ಟೆಯನ್ನೇ ನೀಡಿದ್ದೇವೆ. ಆ ಬಟ್ಟೆಯಲ್ಲೇ ಎಲ್ಲಾ ಸಿಬ್ಬಂದಿಗಳಿಗೆ ಮಾಸ್ಕ್ ಹೊಲಿಯಲಾಗುತ್ತದೆ. 10,000 ಮಾಸ್ಕ್ ಗುರಿ ತಲುಪಿದ ನಂತರ, ಮಾಸ್ಕ್ಗಳ ಅಗತ್ಯಕ್ಕೆ ಅನುಗುಣವಾಗಿ ನಾವು ಮಾಸ್ಕ್ ಹೊಲಿಯಲು ಆದೇಶ ನೀಡುತ್ತೇವೆ. ಈ ಸಾಂಕ್ರಾಮಿಕ ಸಮಯದಲ್ಲಿ ಪಟ್ಟುಹಿಡಿದು ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಈ ಗುಂಪು ಉಚಿತವಾಗಿ ಮಾಸ್ಕ್ ಹೊಲಿಯಲು ನಿರ್ಧರಿಸಿತ್ತು. ಆದರೆ ನಾವು ಮಹಿಳೆಯರಿಗೆ ಮೆಚ್ಚುಗೆಯಾಗಿ ನಿರ್ದಿಷ್ಟ ಮೊತ್ತವನ್ನು ನೀಡುತ್ತೇವೆ'' ಎಂದು ತಿಳಿಸಿದರು.