ಮಂಗಳೂರು,ಸೆ 23 (MSP): ಶಾಸಕರು ಮಾಜಿಗಳಾದರೂ ತಮ್ಮ ಕ್ಷೇತ್ರದಲ್ಲಿ ಪತ್ರಿಕಾಗೋಷ್ಟಿ ನಡೆಸುತ್ತಾ, ವಿರೋಧ ಪಕ್ಷದ ಮೇಲೆ ಹರಿಹಾಯುತ್ತಾ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ ಹಿಂದಿನ ಛಾಪನ್ನು ಉಳಿಸುಕೊಳ್ಳವ ಪ್ರಯತ್ನ ಮಾಡ್ತಾ ಇರ್ತಾರೆ. ಆದರೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾಗಿ ಮಿಂಚಿದ್ದ ಈಗ ಮಾಜಿ ಶಾಸಕರಾದ ಮೋಯ್ದೀನ್ ಬಾವಾ ಇದಕ್ಕೆ ಅಪವಾದ ಎಂಬಂತೆ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಮಂಗಳೂರಿನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿಯೂ ಅಪ್ಪಿ ತಪ್ಪಿ ಕಾಣಸಿಗುವ ಮಾಜಿ ಶಾಸಕ ಬಾವಾ ಈಗೇನಿದ್ದರೂ ಸುರತ್ಕಲ್ ಹಾಗೂ ಅವರ ಮನೆಯ ಬಳಿ ಹೆಚ್ಚಾಗಿ ಕಾಲ ಕಳೆಯುತ್ತಾರೆ.
ಕಳೆದ ಬಾರಿ ಶಾಸಕರಾಗಿದ್ದಾಗ ಮೊಯ್ದೀನ್ ಬಾವಾ, ಕರಾವಳಿಯಲ್ಲಿಯೇ ಅತಿ ಹೆಚ್ಚು ಅನುದಾನಗಳನ್ನು ತಮ್ಮ ಕ್ಷೇತ್ರಕ್ಕೆ ತಂದು ಸುರಿದು ತಮ್ಮ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದರು ಎಂಬ ಕೀರ್ತಿ ಪಡೆದಿದ್ದ ಬಾವ ಅವರ ಮಾತಿಗೆ ಈ ಹಿಂದೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಬೆಲೆ ಇತ್ತು. ಆದರೆ ಈಗ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಗಾಸಿಪ್ ಗಳು ಹರಿದಾಡಲಾರಂಭಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಮೊಯ್ದೀನ್ ಬಾವಾ ಈಗ ಪಕ್ಷದಲ್ಲಿ ಯಾರಿಗೂ ಬೇಡವಾಗಿದ್ದಾರೆ ಎಂಬ ಗುಸುಪಿಸು ಮಾತುಗಳು ಕರಾವಳಿ ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿದೆ. ಇದಕ್ಕೆ ಪುರಾವೆ ಎಂಬಂತೆ ಇತ್ತೀಚೆಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಟಿ ನಡೆಸಿದ್ದರು. ಕಾಂಗ್ರೆಸ್ ನ ಮಾಜಿ ಹಾಲಿ ಮುಖಂಡರುಗಳು ಗುಂಡೂರಾವ್ ಅವರ ಅಕ್ಕ ಪಕ್ಕ ಕುಳಿತಿದ್ದರು. ಆದರೆ ಅಲ್ಲಿಗೆ ಬಂದಿದ್ದ ಬಾವ ಅವರನ್ನು ಸರಿಯಾಗಿ ಉಪಚರಿಸದ ಪಧಾದಿಕಾರಿಗಳು ಕಾರ್ಯಕ್ರಮದಲ್ಲಿ ಸಂಪೂರ್ಣ ಸೈಡ್ ಲೈನ್ ಮಾಡಿದ್ದರು. ಇದರಿಂದ ಸ್ವಲ್ಪ ಹೊತ್ತು ಅಲ್ಲೆ ಹಿಂದೆ ನಿಂತಿದ್ದ ಬಾವಾ ಬಳಿಕ ನೋವಿನಿಂದಲೇ ಕಾಂಗ್ರೆಸ್ ಕಚೇರಿಯಿಂದಲೇ ವಾಪಾಸ್ ತೆರಳಿದ್ದರು.
ಹೇಳಿ ಕೇಳಿ ಸಿಎಂ ಕುಮಾರಸ್ವಾಮಿ ಆಪ್ತ, ವಿಧಾನಪರಿಷತ್ನ ಸದಸ್ಯ, ಜೆಡಿಎಸ್ ಮುಖಂಡ ಬಿಎಂ ಫಾರೂಕ್, ಮೊಯ್ದೀನ್ ಬಾವಾ ಅವರ ಹಿರಿಯ ಸಹೋದರ. ಕಾಂಗ್ರೆಸ್ ನಲ್ಲಿ ಎಕ್ಟಿವ್ ಆಗಿರದ ಮೊಯ್ದೀನ್ ಬಾವಾ ಅವರನ್ನು ಜೆಡಿಎಸ್ ತನ್ನತ್ತ ಸೆಳೆಯುವ ಪ್ರಯತ್ನ ಮಾಡದೆ ಇರಲಾರದು. ಹೀಗಾಗಿ ಮೊಯ್ದೀನ್ ಬಾವಾರ ಮುಂದಿನ ರಾಜಕೀಯ ನಡೆಯ ಕುತೂಹಲ ಮೂಡಿಸಿದೆ.