ಮಂಗಳೂರು,ಸೆ 23 (MSP): ಸಂದರ್ಶನ ಇದೆ ಎಂದು ತಿಳಿಸಿ ಬೆಂಗಳೂರಿಗೆ ತನ್ನ ಪತ್ನಿ ಹಾಗೂ ಮೂರು ತಿಂಗಳ ಹೆಣ್ಣು ಮಗುವಿನೊಂದಿಗೆ ತೆರಳಿ ಬಳಿಕ ನಾಪತ್ತೆಯಾಗಿದ್ದ, ಬಡಗ ಉಳಿಪಾಡಿ ಗ್ರಾಮದ ಗಂಜಿಮಠ ಸಮೀಪದ ಜೆ.ಎಂ. ರಸ್ತೆ ನಿವಾಸಿ ಮುಹಮ್ಮದ್ ಸಮೀರ್ (35) ಅವರ ಮೃತದೇಹ ಸೆ.23ರಂದು ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಮೃತದೇಹದಲ್ಲಿದ್ದ ವಾಚ್ ಮತ್ತು ಶೂ ಮೂಲಕ ಸಮೀರ್ ಅವರ ಶವ ಎಂದು ಅವರ ಸಹೋದರ ಗುರುತು ಪತ್ತೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ:
ಸೆ.13ರಂದು ಮುಹಮ್ಮದ್ ಸಮೀರ್ ತನ್ನ ಪತ್ನಿ ಫಿರ್ದೌಸ್ ಮತ್ತು ಮೂರು ತಿಂಗಳ ಹೆಣ್ಣು ಮಗುವಿನೊಂದಿಗೆ ತನ್ನ ಮನೆಯಿಂದ ಬೆಂಗಳೂರಿಗೆ ಸಂದರ್ಶನ ಇದೆ ಎಂದು ತಿಳಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳಿದ್ದರು. ಸೆ.15 ರಂದು ತನ್ನ ತಾಯಿಗೆ ಕರೆ ಮಾಡಿ ತಾನು ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದ್ದು ಆ ಬಳಿಕ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಸೆ.18 ರಂದು ಸಮೀರ್ ಪತ್ನಿ ತನ್ನ ಮಗುವಿನೊಂದಿಗೆ ತನ್ನ ತಂದೆಯ ಮನೆ ಕಾಪುವಿಗೆ ಬಂದಿದ್ದರು. ಆಕೆಯನ್ನು ವಿಚಾರಿಸಿದಾಗ ಸಮೀರ್ ಬೇರೆ ಹುಡುಗಿಯ ಸಂಪರ್ಕದಲ್ಲಿ ತನ್ನನ್ನು ಹಾಗೂ ಮಗುವನ್ನು ಕಾಪುವಿನಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ. ಅಲ್ಲಿಂದ ನಾಪತ್ತೆಯದ ಸಮೀರ್ ಪತ್ತೆಯಾಗದ ಹಿನ್ನಲೆಯಲ್ಲಿ ತಂದೆ ಅಹಮ್ಮದ್ ಸಾಹೇಬ್ ಬಜ್ಪೆ ಠಾಣೆಗೆ ದೂರು ನೀಡಿದ್ದರು.
ಇದೀಗ ಸಮೀರ್ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಸಮೀರ್ ರನ್ನು ಕೊಲೆಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.