ಕುಂದಾಪುರ, ಸೆ 23 (MSP): ಕುಂದಾಪುರದ ಕಾಳಾವರ ಸಮೀಪದ ಅಸೋಡು ಎಂಬಲ್ಲಿ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಸೆ.23 ರ ಭಾನುವಾರ ಮದ್ಯಾಹ್ನ ನಡೆದಿದೆ. ಹಾಲಾಡಿ ನಿವಾಸಿ ಗಂಗಾಧರ ಆಚಾರ್ಯ(42) ಎಂಬುವರೇ ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ.


ಘಟನೆಯ ವಿವರ: ಭಾನುವಾರ ಮಧ್ಯಾಹ್ನ ಸುಮಾರು 12.30ಗಂಟೆಗೆ ಗಂಗಾಧರ ಆಚಾರ್ಯ ತನ್ನ ಬೈಕಿನಲ್ಲಿ ಹಾಲಾಡಿ ಕಡೆಯಿಂದ ಕೋಟೇಶ್ವರ ಕಡೆಗೆ ಪ್ರಯಾಣಿಸುತ್ತಿದ್ದರು. ಕಾಳಾವರ ಸಮೀಪದ ಅಸೋಡು ಕೋಳಿ ಫಾರಂ ಸಮೀಪ ಬರುತ್ತಿದ್ದಾಗ ಎದುರುಗಡೆಯಿಂದ ಹೋಗುತ್ತಿದ್ದ ಕಾರೊಂದು ಹಾವು ಬಂತೆಂದು ತಕ್ಷಣ ಬ್ರೇಕ್ ಹಾಕಿದ್ದರೆನ್ನಲಾಗಿದೆ. ಈ ಸಂದರ್ಭ ಗಂಗಾಧರ ಆಚಾರ್ಯರ ಬೈಕ್ ಕಾರಿಗೆ ಢಿಕ್ಕಿಯಾಗಿದ್ದು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಅದೇ ಕ್ಷಣದಲ್ಲಿ ಹಿಂದಿನಿಂದ ಬರುತ್ತಿದ್ದ ಕಾರು ಗಂಗಾಧರ ಅಚಾರ್ಯ ಹಾಗೂ ಬೈಕ್ ಮೇಲೆ ಚಲಿಸಿದೆ. ಘಟನೆಯಿಂದ ಗಂಗಾಧರ ಅಚಾರ್ಯ ಸ್ಥಳದಲ್ಲಿಯೇ ಸಾವಮ್ನಪ್ಪಿದ್ದಾರೆ. ಗಂಗಾಧರ ಆಚಾರ್ಯ ಹಾಲಾಡಿಯಲ್ಲಿ ವೆಲ್ಡಿಂಗ್ ಅಂಗಡಿ ಹೊಂದಿದ್ದರು.
ಸಹಾಯಕ್ಕೆ ಬಾರದ ಹೆಲ್ಮೆಟ್: ಗಂಗಾಧರ ಅಚಾರ್ಯ ಯಾವಾಗಲೂ ಬೈಕ್ ಸವಾರಿ ಮಾಡುತ್ತಿದ್ದ ವೇಳೆ ಹೆಲ್ಮೆಟ್ ಧರಿಸುತ್ತಾರೆ. ಆದರೆ ಭಾನುವಾರ ದುರ್ಘಟನೆ ಸಂದರ್ಭ ಹೆಲ್ಮೆಟ್ ಅವರ ಜೀವ ಉಳಿಸಲು ಸಹಕಾರಿಯಾಗಲಿಲ್ಲ. ಹಿಂದಿನಿಂದ ಬಂದ ಯಮಧೂತ ಕಾರು ಅವರ ಮೇಲೆ ಚಲಿಸಿದ ಪರಿಣಾಮ ಸಾವು ಸಂಭವಿಸಿದೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.