ಕುಂದಾಪುರ, ಅ 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಲಾಡಿ ವಲಯದ ರಟ್ಟಾಡಿ ಕಾರ್ಯ ಕ್ಷೇತ್ರದ ಸೇವಾನಿರತರ ಕಚೇರಿಯಲ್ಲಿ ಕ್ಯಾಶಿಯರ್ ಮೇಲೆ ದುಷ್ಕರ್ಮಿಯೋರ್ವ ಹಲ್ಲೆ ನಡೆಸಿ, ಹಣ ದೋಚಿ ಪರಾರಿಯಾದ ಘಟನೆ ನಡೆದು ಇಂದಿಗೆ 17 ದಿನಗಳು ಕಳೆದಿವೆ. ಇಂದಿಗೂ ಆರೋಪಿಗಳು ಪತ್ತೆಯಾಗದ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕರು ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿದ ಘಟನೆಯು ಅ. 5 ರಂದು ಅಮಾಸೆಬೈಲುವಿನಲ್ಲಿ ನಡೆದಿದೆ.
ಘಟನೆ ವಿವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಂದ ಹಣ ಸಂಗ್ರಹಕ್ಕಾಗಿ ಪ್ರತಿ ಬುಧವಾರ ಯೋಜನೆಯವತಿಯಿಂದ ಒಬ್ಬರು ರಟ್ಟಾಡಿಗೆ ಬರುತ್ತಾರೆ. ಹಾಗೇ ಸೆ. 20ರಂದು ಹಣ ಸಂಗ್ರಹಕ್ಕಾಗಿ ಕ್ಯಾಶಿಯರ್ ಪ್ರೀತಿ ಕೊಕ್ಕರ್ಣೆ (23) ಅವರು ರಟ್ಟಾಡಿಯ ಸೇವಾನಿರತರ ಕಚೇರಿಗೆ ಕುಂದಾಪುರದಿಂದ ಯೋಜನೆಯ ವಾಹನದಲ್ಲಿ ಬಂದಿದ್ದರು. ಅಂದು ಯೋಜನೆಯ ವಾಹನವು ಬೆಳಗ್ಗೆ ಯುವತಿಯನ್ನು ಕಚೇರಿಯಲ್ಲಿ ಬಿಟ್ಟು ಮುಂದಿನ ಕಚೇರಿಗೆ ಹಣ ಸಂಗ್ರಹಿಸಲು ತೆರಳಿದ್ದರು. ಪ್ರೀತಿ ಅವರು ಕಚೇರಿಯಲ್ಲಿ ಸದಸ್ಯರಿಂದ ಸುಮಾರು ರೂ. 2.24 ಲಕ್ಷ ಹಣವನ್ನು ಸಂಗ್ರಹಿಸಿ, ಒಬ್ಬಂಟಿಯಾಗಿ ಕುಳಿತಿದ ಸಂದರ್ಭ ಪೂರ್ವಾಹ್ನ 10 ಗಂಟೆಯ ಸಮಯದಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೋರ್ವ ಬಂದು ಕೃಷಿ ಇಲಾಖೆಯ ಕಚೇರಿ ಎಲ್ಲಿದೆ ಎಂದು ಪ್ರಶ್ನಿಸಿದ್ದಾನೆ. ಈ ಬಗ್ಗೆ ಮಾಹಿತಿ ನೀಡುವ ಸಂದರ್ಭ ಮರದ ತುಂಡಿನಿಂದ ಪ್ರೀತಿ ಅವರ ತಲೆ, ದವಡೆ, ಸೊಂಟದ ಭಾಗದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆನಂತರ ಕಾಲಿನಿಂದ ತುಳಿದು ಕ್ಯಾಶ ನಲ್ಲಿದ್ದ ಹಣವನ್ನ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ನಡೆದು 17 ದಿನಗಳು ಕಳೆದಿವೆ. ಇಂದಿಗೂ ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಿನ್ನಲೆಯಲ್ಲಿ ಯೋಜನೆಯ ಹಾಲಾಡಿ ವಲಯದ ವಿವಿಧ ಕಾರ್ಯಕ್ಷೇತ್ರದ ಸುಮಾರು ೨ಸಾವಿರಕ್ಕೂ ಹೆಚ್ಚು ಸದಸ್ಯರು ಸೇರಿ ಅಮಾಸೆಬೈಲುವಿನ ಸರಕಾರಿ ಪ್ರೌಢಶಾಲೆಯಿಂದ ಅಮಾಸೆಬೈಲು ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅನಂತರ ಠಾಣಾಧಿಕಾರಿ ಅವರಿಗೆ ಆರೋಪಿಗಳನ್ನು ಶೀಘ್ರವಾಗಿ ಬಂದಿಸುವಂತೆ ಮನವಿ ನೀಡಿದರು. ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾದಲ್ಲಿ ಮತ್ತೇ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಯೋಜನೆಯವರಿಗೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಸಾಥ್ ನೀಡಿದರು.
ಅಮಾಸೆಬೈಲು ಠಾಣಾ ಉಪ ನೀರೀಕ್ಷಕ ಸುದರ್ಶನ್ ಅವರು ಮನವಿ ಸ್ವೀಕರಿಸಿ ಮಾತನಾಡಿ, ಆರೋಪಿಗಳನ್ನು ಕೂಡಲೆ ಬಂಧಿಸಲಾಗುದು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನಾ ಸಭೆ: ಪ್ರತಿಭಟನಾ ಮೆರವಣಿಗೆಯ ಮೊದಲು ಯೋಜನೆಯ ಸುಮಾರು 2 ಸಾವಿರಕ್ಕೂ ಹೆಚ್ಚು ಸದಸ್ಯರು, ಅಮಾಸೆಬೈಲುವಿನ ಸರಕಾರಿ ಪ್ರೌಢಶಾಲೆಯ ವಠಾರದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಅಮಾಸೆಬೈಲು ಚಾರಿಟೇಬಲ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಜಿ. ಕೊಡ್ಗಿ ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಈ ಪ್ರಕರಣದ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಸರಕಾರ ಹಾಗೂ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಅಮಾಸೆಬೈಲು ಚಾರಿಟೇಬಲ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಜಿ. ಕೊಡ್ಗಿ, ಜನ ಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಆರ್. ನವೀನಚಂದ್ರ ಶೆಟ್ಟಿ ರಟ್ಟಾಡಿ, ಸುಧಾಕರ ಶೆಟ್ಟಿ, ಕುಂದಾಪುರ ತಾಲೂಕು ಯೋಜನಾಧಿಕಾರಿ ಮುರುಳೀಧರ ಶೆಟ್ಟಿ, ಹಾಲಾಡಿ ಒಕ್ಕೂಟದ ವಲಯಾಧ್ಯಕ್ಷ ಸುಲೇಖಾ ಶೆಟ್ಟಿ, ಅಮಾಸೆಬೈಲು ಗ್ರಾ. ಪಂ. ಉಪಾಧ್ಯಕ್ಷ ಭೋಜರಾಜ ಪೂಜಾರಿ ಹಾಗೂ ಸದಸ್ಯರು, ಯೋಜನೆಯ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸತೀಶ ಹೆಗ್ಡೆ ರಟ್ಟಾಡಿ, ಒಕ್ಕೂಟದ ವಲಯಾಧ್ಯಕ್ಷ ಸಂತೋಷ ಪೂಜಾರಿ, ಅಮಾಸೆಬಲು ಠಾಣಾ ಉಪ ನೀರೀಕ್ಷಕ ಸುದರ್ಶನ್, ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ, ದಿನೇಶ್ ಕುಲಾಲ ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.