ನವದೆಹಲಿ, ಸೆ 23(SM): ದೇಶದಲ್ಲಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದ, ವಿವಾದಿತ ರಫೆಲ್ ಒಪ್ಪಂದದ ಬಗ್ಗೆ ಭಾರತ ಹಾಗೂ ಫ್ರಾನ್ಸಿನ ವಿಪಕ್ಷ ನಾಯಕರು ಒಂದೇ ದನಿಯೆತ್ತಿರುವುದು ಕಾಕತಾಳೀಯವಲ್ಲ. ರಫೆಲ್ ಡೀಲ್ ರದ್ದುಗೊಳ್ಳುವುದು, ಸಿಎಜಿ ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಫ್ರಾನ್ಸಿನ ಮಾಜಿ ಅಧ್ಯಕ್ಷ ಹೊಲ್ಲಾಂಡೆ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ ಬಗ್ಗೆ ಉಲ್ಲೇಖಿಸಿದ್ದಾರೆ. ಸೆಪ್ಟೆಂಬರ್ 21ರಂದು ರಫೆಲ್ ಡೀಲ್ ಬಗ್ಗೆ ಹೊಲ್ಲಾಂಡೆ ಹೇಳಿಕೆ ನೀಡಿದ್ದರು. ರಿಲಯನ್ಸ್ ಜತೆ ಒಪ್ಪಂದಕ್ಕೆ ಒಳಗಾಗುವಂತೆ ಫ್ರೆಂಚ್ ಸಂಸ್ಥೆಗೆ ಭಾರತ ಸರ್ಕಾರದಿಂದ ನಿರ್ದೇಶನ ಸಿಕ್ಕಿತ್ತು ಎಂದಿದ್ದರು. ಇದಕ್ಕೂ ಮುನ್ನ ಆಗಸ್ಟ್ 30ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಮುಂಬರುವ ವಾರಗಳಲ್ಲಿ ಕೆಲವು ಬಾಂಬ್ ಗಳು ಪ್ಯಾರೀಸ್ ನಿಂದ ಸ್ಫೋಟಗೊಳ್ಳಲಿದೆ ಎಂದಿದ್ದರು. ರಾಹುಲ್ ಗಾಂಧಿ ಅವರು ಶನಿವಾರದಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
2007ರ ಒಪ್ಪಂದಕ್ಕಿಂತಲೂ 2016ರ ಒಪ್ಪಂದದಲ್ಲಿ ಒಂದು ವಿಮಾನದ ಮೇಲೆ ಶೇ.20ರಷ್ಟು ದರ ಕಡಿತಗೊಳಿಸಲಾಗಿದೆ. ಬೆಲೆ ಮತ್ತು ವೆಚ್ಚದ ವಿಚಾರವನ್ನು ಸಿಎಜಿ ನೋಡಿಕೊಳ್ಳುತ್ತಿದೆ. ಮೂಲ ಒಪ್ಪಂದಕ್ಕಿಂತಲೂ ನಮ್ಮ ಒಪ್ಪಂದ ಅಗ್ಗವೋ ಅಲ್ಲವೋ ಎಂಬುದನ್ನು ಸಿಎಜಿ ಪರಿಶೀಲಿಸಲಿದೆ. ಕಾಂಗ್ರೆಸ್ ಕೂಡ ಸಿಎಜಿ ಎದುರು ತನ್ನದೇ ವಾದ ಮಂಡಿಸಿದೆ. ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರಬರಲಿದೆ ಎಂದರು.